ಮಡಿಕೇರಿ ಲಯನ್ಸ್ ಕ್ಲಬ್ ಅಧ್ಯಕ್ಷರ ಅಧಿಕಾರ ಸ್ವೀಕಾರ

19adarshkdga2
Published on

ಮಡಿಕೇರಿ: ಮಡಿಕೇರಿ ಲಯನ್ಸ್ ಕ್ಲಬ್ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಮದನ್ ಮಾದಯ್ಯ ಅಧಿಕಾರ ಸ್ವೀಕರಿಸಿದರು. ಮಂಗಳೂರು ರಸ್ತೆಯಲ್ಲಿರುವ ಆಕ್ಸಿರಿಚ್ ಹೊಟೇಲ್ ಸಭಾಂಗಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಮಾಜಿ ಲಯನ್ಸ್ ಜಿಲ್ಲಾ ಪ್ರಾಂತಪಾಲ ಡಾ.ಗೀತಾಪ್ರಕಾಶ್ ಪದಗ್ರಹಣ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಲಯನ್ಸ್ ಕ್ಲಬ್ ನಿರಂತರ ಸೇವಾ ಚಟುವಟಿಕೆಯನ್ನು ನಡೆಸಿಕೊಂಡು ಬರುತ್ತಿದ್ದು, ಎಲ್ಲ ಸದಸ್ಯರ ಸಹಕಾರದಿಂದ ಲಯನ್ಸ್ ಕ್ಲಬ್ ಮುನ್ನಡೆಯುತ್ತಿದೆ. ಅಧ್ಯಕ್ಷರಾದವರು ಕೆಲಸ ಮಾಡಿಸುವಂತಿರಬೇಕು. ಯುವಕರಿಗೆ ಧೈರ್ಯ ಮತ್ತು ಪ್ರೋತ್ಸಾಹ ನೀಡುವ ಕೆಲಸ ಆಗಬೇಕು. ಸಂಸ್ಥೆಯ ಅಭಿವೃದ್ಧಿ ದೃಷ್ಟಿಯಿಂದ ನಾಯಕತ್ವ, ಮಾರ್ಗದರ್ಶನ ಹಾಗೂ ಸೇವೆಯ ಗುಣಗಳನ್ನು ಹೊಂದಿರಬೇಕು ಎಂದು ಹೇಳಿದರು.

ನೂತನ ಅಧ್ಯಕ್ಷ ಮದನ್ ಮಾದಯ್ಯ ಮಾತನಾಡಿ, ಲಯನ್ಸ್ ಕ್ಲಬ್ ವಿಶ್ವದಾದ್ಯಂತ ಹಲವು ಕಡೆ ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಲಯನ್ಸ್‌ನ ಮುಖ್ಯ ಗುರಿ ಸೇವೆ ಮತ್ತು ಸಾಂಗತ್ಯವಾಗಿದೆ. ಬಡವರ ಹಾಗೂ ಸಾರ್ವಜನಿಕರ ಜನಪರ ಸೇವೆಯನ್ನು ಮಾಡಿಕೊಂಡು ಬಂದಿದೆ ಎಂದರು.

ನಿರ್ಗಮಿತ ಅಧ್ಯಕ್ಷ ನಟರಾಜು ಕೆಸ್ತೂರು ಮಾತನಾಡಿ, ಕಳೆದ ಸಾಲಿನಲ್ಲಿ ನಿರೀಕ್ಷೆಗೂ ಮೀರಿ ಸೇವೆ ಮಾಡಲು ಸಾಧ್ಯವಾಗಿದೆ. ಇದಕ್ಕೆ ಅನುವು ಮಾಡಿಕೊಟ್ಟ ಪ್ರತಿಯೊಬ್ಬ ಸದಸ್ಯರಿಗೆ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಡಿಕೇರಿ ಲಯನ್ಸ್ ಸದಸ್ಯರ ಕೈಪಿಡಿ ಬಿಡುಗಡೆ ಮಾಡಲಾಯಿತು. ವೇದಿಕೆಯಲ್ಲಿ ವಲಯ ಅಧ್ಯಕ್ಷ ಕನ್ನಂಡ ಬೊಳ್ಳಪ್ಪ, ಸುಮನ್ ಬಾಲಚಂದ್ರ, ಮಹದೇವಪ್ಪ, ಪಿ.ಪಿ.ಸೋಮಣ್ಣ, ಡಾ.ಗಾಯತ್ರಿ ಪ್ರಕಾಶ್, ಕೋಶಾಧಿಕಾರಿ ಕೆ.ದಾಮೋದರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net