

ಚಿತ್ರದುರ್ಗ: ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ಶಿಕ್ಷಣ ಮತ್ತು ದಾಸೋಹಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದರು ಎಂದು ಬಾಪೂಜಿ ಸಮೂಹ ಶಿಕ್ಷಣ ಸಂಸ್ಥೆ ಕಾರ‌್ಯದರ್ಶಿ ಡಾ.ಕೆ.ಎಂ.ವೀರೇಶ್ ಹೇಳಿದರು.
ಶರಣ ಸಾಹಿತ್ಯ ಪರಿಷತ್, ಮಹಿಳಾ ಕದಳಿ ವೇದಿಕೆ ಸಹಯೋಗದೊಂದಿಗೆ ನಗರದ ಬಾಪೂಜಿ ಸಮೂಹ ಸಂಸ್ಥೆಯಲ್ಲಿ ಗುರುವಾರ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 10 ನೇ ಜಯಂತಿ ಪ್ರಯುಕ್ತ ಶರಣ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಹಾಗೂ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ 150 ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿ, ಶ್ರೀಗಳ ಸೇವೆ ಹಾಗೂ ಸಮಾಜಕ್ಕೆ ಮಠಗಳ ಕೊಡುಗೆ ಅನನ್ಯವೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ‌್ಯೆ ಪ್ರೊ.ಎಂ.ಆರ್.ಜಯಲಕ್ಷ್ಮಿ ಮಾತನಾಡಿ, ಮಠಗಳು ಶಿಕ್ಷಣ ಹಾಗೂ ದಾಸೋಹಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದರಿಂದಾಗಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ ಎಂದರು.
ಉಪ ಪ್ರಾಚಾರ‌್ಯ ಎಚ್.ಎನ್.ಶಿವಕುಮಾರ್, ಉಪನ್ಯಾಸಕ ಡಾ.ಹನುಮಂತರೆಡ್ಡಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಕಾರ‌್ಯದರ್ಶಿ ಹುರಳಿ ಬಸವರಾಜ್, ಮಂಜುನಾಥ್, ಡಾ.ಪರಮೇಶ್ವರಪ್ಪ ಕುದುರಿ ಇದ್ದರು.
ಕೆಪಿಎಂ ಗಣೇಶಯ್ಯ ಪ್ರಾರ್ಥಿಸಿದರು. ಎಂ.ಎನ್.ಅಮೃತಾ ಸ್ವಾಗತಿಸಿದರು. ಒ.ಪೂಜಾ ವಂದಿಸಿದರು. ವೀರೇಶ್ ನಿರೂಪಿಸಿದರು.