ಮಠದ ಶಾಲೆಗಳಿಂದ ಸಂಸ್ಕಾರಯುತ ಶಿಕ್ಷಣ

march 31 kottur 03
Published on

ಕೊಟ್ಟೂರು: ಮಠಗಳಲ್ಲಿ ಪಡೆದ ಶಿಕ್ಷಣದಲ್ಲಿ ಸಂಸ್ಕಾರ, ಸಂಸ್ಕೃತಿ, ಸದ್ಭಾವನೆ ಸಮ್ಮಿಳಿತವಾಗಿರುತ್ತದೆ. ಮಠದ ವಿದ್ಯಾರ್ಥಿಗಳು ಬದುಕಿನಲ್ಲಿ ಉನ್ನತ ಸ್ಥಾನಕ್ಕೇರುತ್ತಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಪಟ್ಟಣದ ಚಾನುಕೋಟಿ ಮಠದಲ್ಲಿ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳ ಷಷ್ಠಿ ಸಂಭ್ರಮ ಹಾಗೂ ಪಂಚಾಚಾರ್ಯರ ಯುಗಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶನಿವಾರ ರಾತ್ರಿ ಮಾತನಾಡಿದರು. ಸರ್ಕಾರಿ ಹಾಗೂ ಸಾವಿರಾರು, ಲಕ್ಷಾಂತರ ರೂ. ಕೊಟ್ಟು ಖಾಸಗಿ ಶಾಲೆಗೆ ಸೇರಿಸಿದರೂ ಮಕ್ಕಳಿಗೆ ಮಠದಲ್ಲಿ ದೊರೆಯುವ ಸಂಸ್ಕಾರಯುತ ಶಿಕ್ಷಣ ಸಿಗುವುದಿಲ್ಲ ಎಂದರು.

ನಮ್ಮ ಜೀವನ ಸದಾ ಸಂಸಾರದ ಜಂಟಾಟದಲ್ಲಿರುತ್ತದೆ. ನಾವು ಬದುಕಿನ ಒತ್ತಡದಲ್ಲಿರುತ್ತೇವೆ. ಇದರಿಂದ ಮುಕ್ತಿಪಡೆಯಬೇಕಾದರೆ ಜಗದ್ಗುರುಗಳ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಳ್ಳಬೇಕು. ಜಗದ್ಗುರುಗಳ ಆಶೀರ್ವಚನವನು ಬದುಕಿನಲ್ಲಿ ಅಳವಡಿಸಿಕೊಂಡಾಗ ನಮ್ಮ ಬದುಕು ಪಾವನವಾಗುತ್ತದೆ ಎಂದರು.

ಚಾನುಕೋಟಿ ಮಠದ ಡಾ.ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಭಕ್ತರೊಂದಿಗೆ ಕೊಟ್ಟೂರು-ಹರಿಹರ ರೈಲು ಮಾರ್ಗದ ಹೋರಾಟ, ಕೊಟ್ಟೂರು ತಾಲೂಕು ಸ್ಥಾಪನೆ ಹೋರಾಟ ಮಾಡಿ ಯಶಸ್ವಿಯಾಗಿದ್ದಾರೆ. ಮಕ್ಕಳಿಗೆ ಅನ್ನ ಹಾಗೂ ಶಿಕ್ಷಣ ದಾಸೋಹ, ಸಾಮೂಹಿಕ ಮದುವೆಗಳನ್ನು ಮಾಡುವ ಮೂಲಕ ಬಡ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ತಗ್ಗಿಸಿದ್ದಾರೆ ಎಂದು ತಿಳಿಸಿದರು.

ವೀರಶೈವ ಮಠಗಳು ಯಾವುದೇ ಜಾತಿ, ವರ್ಗದ ಭೇದಿಲ್ಲದೆ ಶಿಕ್ಷಣ ಮತ್ತು ಅನ್ನ ದಾಸೋಹ ಮಾಡಿ ಶೈಕ್ಷಣ ಕ್ರಾಂತಿ ಮಾಡಿವೆ. ಸರ್ಕಾರ ಮಾಡದೇ ಇರುವ ಅನೇಕ ಸಾಮಾಜಿಕ ಕಾರ್ಯಗಳನ್ನು ಮಠಗಳು ಮಾಡಿವೆ. ವೀರಶೈವ ಮಠಗಳು ಇಲ್ಲದಿದ್ದರೆ ಶೈಕ್ಷಣಿಕ ಕ್ಷೇತ್ರ ಪಾತಾಳ ಸೇರುತ್ತಿತ್ತು. ಅನೇಕ ವರ್ಗದವರು ಸುಶಿಕ್ಷಿತರಾಗುತ್ತಿರಲಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.

ಕಾಶಿ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಾನುಕೋಟಿ ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಪ್ರಶಾಂತ ರಿಪ್ಪನ್‌ಪೇಟೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net