

ಹಾಸನ: ಮಠ ಒಂದು ಹಂತಕ್ಕೆ ಬೆಳೆದ ಮೇಲೆ ನೆರವಿಗೆ ಸಾಕಷ್ಟು ಜನ ಬರಬಹುದು. ಏನೂ ಇಲ್ಲದಿದ್ದಾಗ ಸಹಾಯಕ್ಕೆ ನಿಂತವರ ಸ್ಮರಿಸುವುದು ದೊಡ್ಡ ಕೆಲಸವೆಂದು ಖ್ಯಾತ ವಾಗಿ ಪ್ರೊ.ಕೃಷ್ಣೇಗೌಡ ಅವರು ಹೇಳಿದರು.
ನಗರದ ಎಂ.ಜಿ.ರಸ್ತೆಯಲ್ಲಿರುವ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಏರ್ಪಡಿಸಿರುವ ಭೈರವೈಕ್ಯ ಡಾ.ಶ್ರಿ ಬಾಲಗಂಗಾಧರನಾಥ ಸ್ವಾಮೀಜಿ ಅವರು ಪಟ್ಟಾಭಿಷೇಕ ಸುವರ್ಣ ಸಂಪೂರ್ತಿ ಕಾರ್ಯಕ್ರಮದ ಎರಡನೇ ದಿನವಾದ ಶುಕ್ರವಾರ 50 ಜನರಿಗೆ ಸನಾನ ಸಮಾರಂಭದಲ್ಲಿ ಮಾತನಾಡಿದ ಅವರು, ಆದಿಚುಂಚನಗಿರಿ ಮಠದ ಬೆಳವಣಿಗೆಯಲ್ಲಿ ಸನಾನಿತ 50 ಜನರ ಕೊಡುಗೆ ಎಷ್ಟೆಂಬುದರ ಕುರಿತು ಲೆಕ್ಕ ಹಾಕಲು ಸಾಧ್ಯವಿಲ್ಲ. ಏನೂ ಇಲ್ಲದಿದ್ದಾಗ ನೆರವಿಗೆ ಬರುವವರ ಸಂಖ್ಯೆ ತೀರಾ ವಿರಳ. ಆದ್ದರಿಂದಲೇ ಜಗತ್ತು ಊಹಿಸಿಕೊಳ್ಳಲು ಸಾಧ್ಯವಾಗದಷ್ಟು ಬದಲಾವಣೆಯನ್ನು ಬಾಲಗಂಗಾಧರನಾಥ ಸ್ವಾಮೀಜಿ ಅವರು ಮಾಡಿದ್ದಾರೆ ಎಂದು ಭಣಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ಗುರು ಸೇವೆಯನ್ನು ತ್ಯಾಗ ಹಾಗು ಸೇವಾ ಮನೋಭಾವದಿಂದ ಮಾಡಲಾಗುತ್ತದೆ. ಆದ್ದರಿಂದಲೇ ಗುರುವಿಗೆ ಮಹತ್ವದ ಸ್ಥಾನಮಾನವನ್ನು ಅನಾದಿ ಕಾಲದಿಂದಲೂ ನೀಡಲಾಗುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಸೇವೆ ಹಾಗು ತ್ಯಾಗದ ಪರಿಕಲ್ಪನೆಯೇ ಇಲ್ಲ. ಅವರು ಭೋಗ ವಿಲಾಸಿ ಜೀವನ ಬಯಸುತ್ತಾರೆ. ಆ ಕಡೆಯಿಂದ ಎಷ್ಟು ಬೇಕಾದರೂ ಬರಲಿ ಈ ಕಡೆಯಿಂದ ಏನೂ ಹೋಗುವುದು ಬೇಡ ಎಂಬ ಮನೋಭಾವ ಪಾಶ್ಚಿಮಾತ್ಯರದ್ದಾಗಿದೆ. ಆದರೆ ಪೂರ್ವೋತ್ತರ ರಾಷ್ಟ್ರಗಳಲ್ಲಿ ಅದರಲ್ಲೂ ಭಾರತದಲ್ಲಿ ಸೇವೆ ಹಾಗು ತ್ಯಾಗಕ್ಕೆ ಪರಂಪರೆಯಿದೆ. ಆದಿಚುಂಚನಗಿರಿ ಮಠವು ಸದೃಢ ಸಮಾಜ ನಿರ್ಮಾಣದಲ್ಲಿ ತನ್ನದೇಯಾದ ಪಾತ್ರ ವಹಿಸುತ್ತಿದೆಯೆಂದು ಶ್ಲಾಘಿಸಿದರು.
ಮಠದ ಪರಂಪರೆಗೆ ಆರಂಭ ಅಥವಾ ಅಂತ್ಯ ಎಂಬುದಿಲ್ಲ. ಮಠದ 71ನೇ ಪೀಠಾಧಿಪತಿಯಾಗಿ ಅಧಿಕಾರ ವಹಿಸಿಕೊಂಡ ಶ್ರಿ ಬಾಲಗಂಗಾಧರನಾಥ ಸ್ವಾಮೀಜಿ ಅವರು ಕಾಲವಾದ ಬಳಿಕ ಎಲ್ಲವೂ ಮುಗಿಯಿತು ಎನ್ನುವಂತಿಲ್ಲ. ಸತ್ಕಾರ್ಯಗಳ ಮಾಡಲು ಅವರು ನಿಯೋಜನೆಗೊಂಡಿದ್ದರು ಹಾಗು ಬೇರೆ ಯಾವುದೋ ರೂಪದಲ್ಲಿ ಭಗವಂತ ಅಂತಹ ಮಹಾತ್ಮರನ್ನು ಕಳುಹಿಸುತ್ತಾನೆ ಎಂದರು.
ಬಾಲಗಂಗಾಧರನಾಥ ಸ್ವಾಮೀಜಿ ಅವರು ಬಾಲಕನಾಗಿದ್ದಾಗಲೇ ಲೋಕೋದ್ದಾರ ಚಿಂತನೆಯಲ್ಲಿ ತೊಡಗಿದ್ದರು. ಅವರು ದೊಡ್ಡ ವ್ಯಕ್ತಿಯಾಗುತ್ತಾರೆಂಬ ಸುಳಿವು ಕುಟುಂಬಸ್ಥರಿಗೆ ತಿಳಿದಿತ್ತು. ಅವರ ತಾತ ಶ್ರಿಗಳನ್ನು ಯಾವಾಗಲೂ ಗುರುಗಳೇ ಎಂದೇ ಕರೆಯುತ್ತಿದ್ದರು ಎಂದರು.
ಚಿತ್ರದುರ್ಗದ ಶಿವಲಿಂಗನಾಥ ಸ್ವಾಮೀಜಿ ಅವರು ಮಾತನಾಡಿ, ಬಾಲಗಂಗಾಧರನಾಥ ಸ್ವಾಮೀಜಿ ಅವರ ಮಾನವೀಯ ಮೌಲ್ಯ, ಕಳಕಳಿಯನ್ನು ಶ್ರಿ ಶಂಭುನಾಥ ಸ್ವಾಮೀಜಿ ಅವರಲ್ಲಿ ಕಾಣಬಹುದು. ಹಾಸನ ಮಠದಿಂದ ನಡೆಯುವ ಪ್ರತಿಯೊಂದು ಕಾರ್ಯಕ್ರಮವೂ ಅರ್ಥಪೂರ್ಣವಾಗಿರುತ್ತವೆ ಎಂಬುದಕ್ಕೆ ಇತ್ತೀಚೆಗೆ ಚನ್ನರಾಯಪಟ್ಟಣದಲ್ಲಿ ಪೌರ ಕಾರ್ಮಿಕರಿಗೆ ಏರ್ಪಡಿಸಿದ್ದ ಸಮಾರಂಭವೇ ಸಾಕ್ಷಿ. ಪೌರ ಕಾರ್ಮಿಕರಿಗೆ ಸನಾನಿಸಿ ಅಲ್ಪ ಕಾಣಿಕೆ ನೀಡುವುದರ ಜೊತೆಗೆ ನಿವೇಶನ ಹಂಚಿಕೆಗೂ ಶ್ರಿಗಳು ಯೋಚಿಸಿದ್ದು ಗಮನಾರ್ಹ ಸಂಗತಿಯೆ ಎಂದು ಹೇಳಿದರು.
ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರಿ ಶಂಭುನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.
ಕಾಗಿನೆಲೆ ಕನಕಗುರು ಪೀಠದ ಶ್ರಿ ಶಿವಾನಂದಪುರಿ ಸ್ವಾಮೀಜಿ, ಶ್ರಿ ಚಂದ್ರಶೇಖರನಾಥ ಸ್ವಾಮೀಜಿ, ಶ್ರಿ ಕೈಲಾಸಪತಿನಾಥ, ಬೆಂಗಳೂರಿನ ಶ್ರಿ ಸೌಮ್ಯನಾಥ ಸ್ವಾಮೀಜಿ, ವೆಂಕಟೇಶ ಮಹಾರಾಜರು, ರಾಮಚಂದ್ರಪ್ಪ ಮೇತ್ರಿ, ಶ್ರಿ ಶಿವಪುತ್ರನಾಥ ಸ್ವಾಮೀಜಿ, ತಮಿಳುನಾಡು ಕಂಬಂ ಶಾಸಕ ರಾಮಕೃಷ್ಣನ್, ಶಾಸಕರಾದ ಎಚ್.ಕೆ.ಸುರೇಶ್, ಸಿ.ಎನ್.ಬಾಲಕೃಷ್ಣ, ಪ್ರಗತಿಪರ ಕೃಷಿಕ ಎಂ.ಸಿ.ರಂಗಸ್ವಾಮಿ, ಮುಖಂಡ ಯೋಗಾರಮೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಜಿ.ಎಲ್.ಮುದ್ದೇಗೌಡ, ಪತ್ರಕರ್ತ ಎಚ್.ಬಿ.ಮದನಗೌಡ ಹಾಗು ಇತರರಿದ್ದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶಗೌಡ ಇತರರು ಇದ್ದರು.