

ಚಿಕ್ಕಮಗಳೂರು: ಸತ್ಯ ಕಹಿ ಮತ್ತು ಕಠೋರವಾಗಿರುತ್ತದೆ. ಸತ್ಯದ ಹಾದಿಯಲ್ಲಿ ಸಾಗಬೇಕಾದರೆ ಕಠಿಣ ಮಾರ್ಗ ಅನುಸರಿಸಲೇಬೇಕು. ಆ ಮೂಲಕ ಮಠಗಳು ಬದುಕಿಗೆ ಬೆಳಕನ್ನು ಕೊಡುವ ಕೇಂದ್ರಗಳಾಗಬೇಕು ಎಂದು ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಸ್ವಾಮೀಜಿ ಹೇಳಿದರು.
ತಾಲೂಕಿನ ಅಂಬಳೆ ರಸ್ತೆಯಲ್ಲಿ ಶ್ರೀ ಜಯಬಸವ ತಪೋವನ ವಿಶ್ವಧರ್ಮ ಪೀಠದ ಲೋಕಾರ್ಪಣೆ ಮತ್ತು ಬಸವ ತತ್ವ ಸಮಾವೇಶದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು. ಕೆಲವರಿಗೆ ಸತ್ಯ ಹೇಳಿದರೆ ಸಹಿಸಿಕೊಳ್ಳಲು ಆಗುವುದಿಲ್ಲ. ಶ್ರೀ ಜಯಬಸವಾನಂದ ಸ್ವಾಮೀಜಿ ಅವರಿಗೆ ಆಗಿರುವ ನೋವು, ಅನುಭವಿಸಿರುವ ವೇದನೆ, ಸಮಸ್ಯೆ, ದುಃಖ, ಕಷ್ಟಗಳೆಲ್ಲವೂ ಬಹಳ ವೇಗವಾಗಿ ಓಡಿಹೋಗಿವೆ. ಈ ಸ್ವಾಮೀಜಿಗಳ ಇಡೀ ಕುಟುಂಬ ಬಸವ ತತ್ವ, ಆದರ್ಶಗಳ ಮಾರ್ಗದ ಹಿನ್ನೆಲೆಯಲ್ಲಿ ಬೆಳೆದು ಬಂದವರು. ಹಾಗಾಗಿ ನಮಗೆ ವ್ಯಕ್ತಿ ಮುಖ್ಯವಾಗಬಾರದು ತತ್ವ ಮುಖ್ಯವಾಗಬೇಕು ಎಂದರು.
ಶ್ರೀ ಜಯಬಸವ ವಿಶ್ವಧರ್ಮ ಪೀಠದ ಡಾ. ಜಯಬಸವಾನಂದ ಸ್ವಾಮೀಜಿ ಮಾತನಾಡಿ, ಜಯಬಸವ ತಪೋವನ ವಿಶ್ವಧರ್ಮ ಪೀಠ ನೊಂದವರ, ಬಡವರ, ಶೋಷಿತರ, ದೀನ ದಲಿತರ ಆಶಾಕಿರಣ ಆಗಬೇಕೆಂಬುದು ನನ್ನ ಆಶಯ. ಜಗತ್ತಿನ ಜನ ಅಶಾಂತಿ ಮತ್ತು ಅಸಹನೆಯಿಂದ ಬದುಕುತ್ತಿದ್ದಾರೆ. ಅವರಿಗೆ ಶಾಂತಿ, ಸಹನೆ, ಸಮಾಧಾನದ ಬದುಕು ಬೇಕೆಂದರೆ ಮಠ ಮಂದಿರಗಳಿಂದ ಮಾತ್ರ ಸಾಧ್ಯ. ಅಂತಹ ಕೆಲಸವನ್ನು ಧ್ಯಾನ, ಶಿವಯೋಗ ಮತ್ತು ಪೂಜೆಗಳ ಮೂಲಕ ಜನರನ್ನು ಸನ್ಮಾರ್ಗಕ್ಕೆ ತರುವ ಉದ್ದೇಶ ಈ ಪೀಠದ್ದಾಗಿದೆ ಎಂದರು.
ಸೂಫಿ ಗುರುಗಳಾದ ಖ್ವಾಜಾ ಮೆಹಬೂಬ್ ಅಲ್ಲಾಷಾ ಮಾತನಾಡಿ, ಸಾಧು, ಸಂತರು, ಸೂಫಿಗಳು ಭಾರತದಲ್ಲಿ ಹುಟ್ಟಬೇಕಾದರೆ ಪುಣ್ಯ ಮಾಡಿರಬೇಕು. ಯಾರಿಗೆ ಗುರು ಇರುವುದಿಲ್ಲವೋ ಅವರ ಜೀವನಕ್ಕೆ ದಾರಿಯೇ ಇರುವುದಿಲ್ಲ. ಕತ್ತಲೆಯನ್ನು ಹೊಡೆದೋಡಿಸಿ ಬೆಳಕು ತರುವ ಶಕ್ತಿ ಗುರು. ಹಾಗಾಗಿ ಗುರು ಇದ್ದರೆ ಮಾತ್ರ ಮಾರ್ಗ. ನಮ್ಮ ಜೀವನ ಸಾರ್ಥಕವಾಗಬೇಕಾದರೆ ಗುರು ಇರಲೇಬೇಕು ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.