ಮಠಗಳು ಇಲ್ಲದಿದ್ದರೆ ರಾಜ್ಯದ ಪರಿಸ್ಥಿತಿ ಏನಾಗುತಿತ್ತೆಂದು ಆಲೋಚಿಸಿ: ಬಿ.ವೈ. ವಿಜಯೇಂದ್ರ

vijayendra
Published on

ಮೈಸೂರು: ಮಠಗಳು ಇಲ್ಲದೆ ಇದ್ದಿದ್ದರೆ ರಾಜ್ಯದ ಪರಿಸ್ಥಿತಿ, ಆರ್ಥಿಕ ಪರಿಸ್ಥಿತಿ ಏನಾಗುತಿತ್ತು ಎಂಬುದನ್ನು ಎಲ್ಲರು ಆಲೋಚನೆ ಮಾಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ, ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳು ಹಾಗೂ ಬಸವ ಬಳಗಗಳ ಒಕ್ಕೂಟ ದ ರಜತ ಮಹೋತ್ಸ ಪ್ರಯುಕ್ತ ನಗರದ ಸುತ್ತೂರು ಮಠದಲ್ಲಿ ಭಾನುವಾರ ಹಮ್ಮಿಕೊಂಡ ಯುವ ಸಂಕಲ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಠಗಳು ಅನ್ನ, ಅಕ್ಷರ ದಾಸೋಹದ ಮೂಲಕ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿವೆ. ಮಠಗಳ ಸೇವಾಕಾರ್ಯ ಶ್ಲಾಘನೀಯ. ಸುತ್ತೂರು ಮಠದ ಸೇವಾಕಾರ್ಯದ ಕಾರಣಕ್ಕೆ ಎಲ್ಲ ಸಮುದಾಯದ ನಾಯಕರು ಮೈಸೂರಿಗೆ ಆಗಮಿಸಿದಾಗ ತಪ್ಪದೆ ಸುತ್ತೂರು ಮಠಕ್ಕೆ ಭೇಟಿ ನೀಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಸಹ ಸುತ್ತೂರು ಮಠದ ಭಕ್ತರು ಎಂಬುದು ಹೆಮ್ಮೆಯ ವಿಚಾರ ಎಂದು ಹೇಳಿದರು.

ವೀರಶೈವ ಲಿಂಗಾಯತ ಸಮಾಜದ ಸಂಘ ಸಂಸ್ಥೆಗಳು ಬೆಳ್ಳಿಹಬ್ಬ ಆಚರಿಸುತ್ತಿರುವುದು ಸಮಾಜದ ಹೆಮ್ಮೆ ಮಾತ್ರವಲ್ಲ ಮೈಸೂರಿನ ಸಾಂಸ್ಕೃತಿಕ ಹಿರಿಮೆ ಕೂಡ ಹೌದು. ಸುತ್ತೂರು ಶ್ರೀಗಳ ದೂರದೃಷ್ಟಿ ಫಲವಾಗಿ ನಮ್ಮ ಸಮಾಜದ ಸಂಸ್ಥೆಗಳು ಪ್ರಾರಂಭವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ಸಮಾಜ ಇಂದು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಚಿಂತನೆ ಮಾಡಬೇಕು. ಸಮಾಜವನ್ನು ಸರಿದಾರಿಗೆ ಕೊಂಡೊಯ್ಯುವ ಜವಾಬ್ದಾರಿ ಎಲ್ಲರ ಮೇಲಿದೆ. ಇದು ಕೇವಲ ಮಠದ ಕಾರ್ಯವಲ್ಲ, ಮಠದ ಕಾರ್ಯ ಅಂದುಕೊಂಡರೆ ಸಮಾಜವನ್ನು ದೇವರಿಂದ ಕಾಪಾಡಲು ಸಾಧ್ಯವಿಲ್ಲ. ಸಮಾಜ ಇರುವುದು ನನಗೋಸ್ಕರ ಎಂಬ ಭಾವನೆ ಕೆಲವರಲ್ಲಿ ಇದೆ. ಈ ಭಾವನೆ ದೂರವಾಗಬೇಕು. ಸಮಾಜಕೋಸ್ಕರ ನಾವು ಬದುಕಬೇಕು ಎಂದು ಕರೆ ನೀಡಿದರು.
ಶ್ರೀ ಕುಂದೂರು ಮಠದ ಮಠಾಧ್ಯಕ್ಷ ಶ್ರೀ ಡಾ. ಶರತ್‌ಚಂದ್ರ ಸ್ವಾಮೀಜಿ, ವಿಭೂತಿಪುರದ ಶ್ರೀ ವೀರಸಿಂಹಾಸನ ಸಂಸ್ಥಾನ ಮಠದ ಶ್ರೀ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, ಕನಕಪುರದ ದೇಗುಲಮಠದ ಕಿರಿಯ ಶ್ರೀಗಳಾದ ಶ್ರೀ ಚನ್ನಬಸವ ಸ್ವಾಮೀಜಿ, ಶಾಸಕ ನಿರಂಜನ್ ಕುಮಾರ್, ಮಹಾಸಭಾದ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷ ಮಹಾಂತೇಶ್ ಪಾಟೀಲ್, ರಾಜ್ಯ ಯುವ ಘಟಕದ ಅಧ್ಯಕ್ಷ ಮನೋಹರ್ ಬಿ. ಅಬ್ಬಿಗೆರೆ, ಮಹಾಸಭಾ ಅಧ್ಯಕ್ಷ ಎಲ್.ಎಸ್. ಮಹದೇವಸ್ವಾಮಿ ಲಲಿತಾದ್ರಿಪುರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net