ಮಠಗಳಿಂದ ಹಿಂದು ಧರ್ಮ ಉಳಿವು

IMG-20250517-WA0053
Published on

ಬಾಗೂರು: ಪ್ರಸ್ತುತ ದೇಶದಲ್ಲಿ ಮಠ ಮಾನ್ಯಗಳ ಪರಂಪರೆಯಿಂದ ಮಾತ್ರ ಹಿಂದು ಧರ್ಮ ಉಳಿಯಲು ಸಾಧ್ಯವಾಗಿದೆ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಮಠದ ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನ ರೇಣುಕಾ ಡಾ.ಶ್ರೀ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯಪಟ್ಟರು.

ಹೋಬಳಿಯ ಅಣತಿ ಗ್ರಾಮದಲ್ಲಿ ಶ್ರೀ ರುದ್ರೇಶ್ವರಸ್ವಾಮಿ ನೂತನ ದೇಗುಲ ಉದ್ಘಾಟನೆ, ಶ್ರೀ ಭದ್ರಕಾಳಿ ದೇವಿ, ವಿಘ್ನೇಶ್ವರ, ಬಸವೇಶ್ವರ ಸ್ವಾಮಿ ನೂತನ ವಿಗ್ರಹ ಪ್ರತಿಷ್ಠಾಪನೆ, ಗೋಪುರಕ್ಕೆ ಕಳಸಾಧಾರಣೆ, ಕುಂಭಾಭಿಷೇಕ, ಶಿವ ದೀಕ್ಷೆ, ಧರ್ಮ ಜಾಗೃತಿ ಭಾವೈಕ್ಯತೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವರ ಅನುಗ್ರಹವಿಲ್ಲದೆ ಏನೂ ನಡೆಯಲು ಸಾಧ್ಯವಿಲ್ಲ. ಬೇರೆಯವರು ಮಾಡುವ ಕೆಲಸದಲ್ಲಿ ತಪ್ಪು ಹುಡುಕುವ ಮೊದಲು ತನ್ನ ತಪ್ಪಿನ ಬಗ್ಗೆ ಚಿಂತಿಸಬೇಕು. ಆಗ ಮಾತ್ರ ಪರಿಪೂರ್ಣ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ. ಬಾಳೆಹೊನ್ನೂರು ಮಠ ಶೈಕ್ಷಣಿಕ, ಸಾಮಾಜಿಕವಾಗಿ ಜನರ ಹಾಗೂ ಸಮಾಜದ ಉದ್ಧಾರಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಎಲ್ಲ ಧರ್ಮಗಳಿಗಿಂತ ಮಾನವ ಧರ್ಮವೇ ಶ್ರೇಷ್ಠ. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವುದೇ ಮಾನವ ಧರ್ಮದ ಮೂಲ ಸಂಕೇತವಾಗಿದೆ ಎಂದರು.

ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್ ಮಾತನಾಡಿ, ನಮ್ಮ ಧರ್ಮವನ್ನು ಗೌರವಿಸಿದರೆ ಮಾತ್ರ ನಮ್ಮ, ಸಂಸ್ಕೃತಿ, ಧರ್ಮ ಉಳಿಯಲು ಸಾಧ್ಯವಾಗುತ್ತದೆ. ತಾಲೂಕಿನ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡುತ್ತಿದ್ದೇನೆ. ಹೋಬಳಿಯ ಕೆಂಕರೆ ಬಳಿಯಿಂದ ತಿಮ್ಲಾಪುರ ಸೇರಿದಂತೆ ಈ ಭಾಗದ ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ಈ ಭಾಗದ ರೈತರ ದಶಕದ ಕನಸು ನನಸಾಗಲಿದೆ ಎಂದು ಹೇಳಿದರು.

ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಅಣತಿ ಭಾಗದ ಕೆರೆಗಳಿಗೆ ನವಿಲೆ ಏತ ನೀರಾವರಿ ಯೋಜನೆ ಮೂಲಕ ನೀರು ಹರಿಸಲಾಗಿದೆ. ಇದರಿಂದ ಈ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗಿದೆ. ಶ್ರೀ ಲಕ್ಷ್ಮೀಕಾಂತ ದೇವಾಲಯ ಜೀರ್ಣೋದ್ಧಾರಕ್ಕೆ ಕೇಂದ್ರ ಪ್ರಾಚ್ಯವಸ್ತು ಇಲಾಖೆ ವತಿಯಿಂದ ಸುಮಾರು 80 ಲಕ್ಷ ರೂ.ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದು ತಿಳಿಸಿದರು.

ಹೊನ್ನವಳ್ಳಿ ಕರಿಸಿದ್ದೇಶ್ವರ ಮಠದ ಶ್ರೀ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಾಳೆಹೊನ್ನೂರು ಮಠದ ಪರಂಪರೆ ಕೇವಲ ದೇಶವಲ್ಲದೆ ವಿದೇಶದವರೆಗೂ ಹಬ್ಬಿದೆ. ಮೊದಲು ದೇಶದ ಬಗ್ಗೆ ಚಿಂತಿಸುವುದರಿಂದ ದೇಶ ಇನ್ನಷ್ಟು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದರು.

ಅಡ್ಡ ಪಲ್ಲಕ್ಕಿ ಉತ್ಸವ

ಶ್ರೀ ರಂಭಾಪುರಿ ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಗ್ರಾಮಕ್ಕೆ ಸ್ವಾಗತಿಸಿದರು. ಶ್ರೀಗಳು ರುದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ನವಿಲೆ ಎನ್.ಪರಮೇಶ್, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಗಂಗೇಗೌಡ, ನುಗ್ಗೇಹಳ್ಳಿ ಪುರವರ್ಗ ಹಿರೇಮಠದ ಡಾ.ಶ್ರೀ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಂಬಲಳ್ಳಿ ಮಠದ ಶ್ರೀ ಶಿವಾಚಾರ್ಯ ಸ್ವಾಮೀಜಿ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷ ಎ.ಇ.ಚಂದ್ರಶೇಖರ್, ತಾಲೂಕು ಅರ್ಚಕರ ಸಂಘದ ಅಧ್ಯಕ್ಷ ಶ್ರೀಧರ್ ಮೂರ್ತಿ, ಚನ್ನರಾಯಪಟ್ಟಣ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಸಿ.ಆನಂದ್ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಅಣತಿ ವೆಂಕಟೇಶ್, ಎ.ಸಿ.ನಾಗೇಶ್, ಬಿ.ಟಿ.ಧರ್ಮ, ಎ.ಡಿ.ಶಿವೇಗೌಡ, ಭುವನಹಳ್ಳಿ ಯೋಗೇಶ್, ದುಗ್ಗೇನಹಳ್ಳಿ ವೀರೇಶ್, ಬಿ.ಟಿ.ಚಂದ್ರಶೇಖರ್, ಬಿ.ಎಚ್.ರಾಮಚಂದ್ರು, ಪಿಡಿಒ ಸಂತೋಷ್ ನವಳಗಿ, ದೇವಾಲಯದ ಶಿಲ್ಪಿ ಶಾಂತಕುಮಾರ್, ರುದ್ರೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಸಮಿತಿ ಸದಸ್ಯರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net