ಮಠಗಳ ಪರಂಪರೆಯಲ್ಲಿ ಕೊಡಗಿನ ರಾಜರ ಕೊಡುಗೆ ಅಪಾರ

5ss1udgatane sutturu swamy
ಕೊಡ್ಲಿಪೇಟೆ ಸಮಿಪದ ಶ್ರೀ ಕಲ್ಲುಮಠದ ಮಠಾಧೀಶ ಶ್ರೀ ಮಹಾಂತಸ್ವಾಮಿಗಳು ಮಠದ ಪೀಠಾಧ್ಯಕ್ಷರಾಗಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸ್ವಾಗತ ಸಮಿತಿ ವತಿಯಿಂದ ಆಯೋಜಿಸಿದ್ದ ಪೀಠಾರೋಹಣದ ಸುವರ್ಣ ಮಹೋತ್ಸವ, ಶ್ರೀ ಬಸವೇಶ್ವರ ಜಯಂತಿ, ಡಾ.ಶಿವಕುಮಾರ ಸ್ವಾಮಿ ಜಯಂತಿ, ಶ್ರೀ ನಂಜುಂಡ ಸ್ವಾಮೀಜಿ ಸಂಸ್ಮರಣೋತ್ಸವ ಹಾಗೂ ಮಠದ ಶ್ರೀ ನಂಜುಂಡೇಶ್ವರ ವಿದ್ಯಾಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮದ ಧಾರ್ಮಿಕ ಸಮಾರಂಭದಲ್ಲಿ ಶ್ರೀ ಸಿದ್ಧಗಂಗಾ ಶ್ರೀ ಸಿದ್ದಲಿಂಗ ಸ್ವಾಮೀಜಿ, ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪ್ರಮುಖರಾದ ಶಂಕರ್ ಬಿದರಿ ಇತರರು ಇದ್ದರು.
Published on

ಶನಿವಾರಸಂತೆ: ಮಠಗಳ ಪರಂಪರೆಯಲ್ಲಿ ಕೊಡಗಿನ ರಾಜರ ಕೊಡುಗೆ ಅಪಾರವಾಗಿದೆ ಎಂದು ತುಮಕೂರು ಸಿದ್ಧಗಂಗಾ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.

ಕೊಡ್ಲಿಪೇಟೆ ಸಮಿಪದ ಶ್ರೀ ಕಲ್ಲುಮಠದ ಮಠಾಧೀಶ ಶ್ರೀ ಮಹಾಂತಸ್ವಾಮಿಗಳು ಮಠದ ಪೀಠಾಧ್ಯಕ್ಷರಾಗಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸ್ವಾಗತ ಸಮಿತಿ ವತಿಯಿಂದ ಆಯೋಜಿಸಿದ್ದ ಪೀಠಾರೋಹಣದ ಸುವರ್ಣ ಮಹೋತ್ಸವ, ಶ್ರೀ ಬಸವೇಶ್ವರ ಜಯಂತಿ, ಡಾ.ಶಿವಕುಮಾರ ಸ್ವಾಮಿ ಜಯಂತಿ, ಶ್ರೀ ನಂಜುಂಡ ಸ್ವಾಮೀಜಿ ಸಂಸ್ಮರಣೋತ್ಸವ ಹಾಗೂ ಮಠದ ಶ್ರೀ ನಂಜುಂಡೇಶ್ವರ ವಿದ್ಯಾಸಂಸ್ಥೆಯ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿ, ಕೊಡಗಿನ ರಾಜಾಳ್ವಿಕೆ ಕಾಲದಲ್ಲಿ 108 ಮಠಗಳು ಅಸ್ತಿತ್ವದಲ್ಲಿದ್ದವು. ಈ ಪೈಕಿ ಕಲ್ಲುಮಠ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.

ಮಠ ಮಾನ್ಯಗಳು ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಸೇವಾ ಪರಂಪರೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಹಿಂದೆ ಅಸ್ತಿತ್ವದಲ್ಲಿದ್ದ ಮಠಗಳು ಇಂದಿನ ಕಾಲಘಟ್ಟದಲ್ಲಿ ಕಡಿಮೆಯಾಗುತ್ತಿವೆ. ಕೊಡಗಿನ ರಾಜಾಳ್ವಿಕೆ ಕಾಲದಲ್ಲಿ ನೂರಾರು ಮಠ ಪರಂಪರೆ ಅಸ್ತಿತ್ವದಲ್ಲಿದ್ದವು. ಆದರೆ, ಕೊಡಗಿನಲ್ಲಿ ಈಗ ಮಠಗಳು ಕಡಿಮೆಯಾದರೂ ಕಲ್ಲುಮಠ ಇನ್ನೂ ಮಠದ ಪರಂಪರೆ ಉಳಿಸಿಕೊಂಡಿದೆ ಎಂದರು.

ಕಲ್ಲುಮಠದ ಶ್ರೀ ಮಹಾಂತಸ್ವಾಮಿಗಳು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆಧ್ಯಾತ್ಮಿಕವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವುದು ಇತರ ಮಠಗಳು ಮತ್ತು ಮಠಾಧೀಶರಿಗೆ ಅವರು ಮಾದರಿಯಾಗಿದ್ದಾರೆ. ಈ ಮೂಲಕ ಅವರು ಮಠವನ್ನು ಮತ್ತಷ್ಟು ಅಭಿವೃದ್ಧಿಪಡಿಸುವಂತೆ ಹಾರೈಸಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮನುಷ್ಯ ಜೀವನವನ್ನು ಎಚ್ಚರಿಕೆಯಿಂದ ಸಾಗಿಸಿದರೆ ಸಾರ್ಥಕತೆಯನ್ನು ಕಾಣಬಹುದು. ಮಠ, ಶರಣರ ಸಂಪರ್ಕದಿಂದ ದುಃಖ, ದುಮ್ಮಾನಗಳು ದೂರವಾಗುತ್ತವೆ ಎಂದರು.

ಆಧ್ಯಾತ್ಮಿಕ ಸಾಂಸ್ಕೃತಿಕ ಪರಂಪರೆಯಲ್ಲಿ ಕೊಡಗಿನ ಅರಸರ ಕೊಡುಗೆ ಇತಿಹಾಸ ಪುಟದಲ್ಲಿ ಸೇರಿಕೊಂಡಿದೆ. ಈ ದಿಸೆಯಲ್ಲಿ ಕೊಡಗಿನಲ್ಲಿ ಹಲವಾರು ಮಠಗಳು, ಆಧ್ಯಾತ್ಮಿಕ, ಶೈಕ್ಷಣಿಕವಾಗಿ ಅಭಿವೃದ್ಧಿಯಾಗುತ್ತಿವೆ. ಈ ಪೈಕಿ ಕಲ್ಲುಮಠ ಶೈಕ್ಷಣಿಕವಾಗಿ ಅಭಿವೃದ್ಧಿಗೊಳ್ಳುತ್ತಿದ್ದು ಇದಕ್ಕೆ ಮಠಾಧೀಶ ಶ್ರೀ ಮಹಾಂತ ಸ್ವಾಮೀಜಿ ಅವರ 50 ವರ್ಷಗಳ ಪರಿಶ್ರಮವೇ ಕಾರಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಲ್ಲುಮಠದ ಮಠಾಧೀಶ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಮಠ, ಮಂದಿರಗಳಿದ್ದರೂ ಧಾರ್ಮಿಕ ಮತ್ತು ಆಧ್ಯಾತ್ಮಿಕ ಹಸಿರು ಕಾಣುವುದಿಲ್ಲ. ಇದರ ಬದಲಿಗೆ ಹಣದ ಹಸಿರು ಹೆಚ್ಚಾಗುತ್ತಿದೆ. ಧಾರ್ಮಿಕತೆ ಹಿಂದೆ ಹೋಗಬೇಕಾದವರು ಹಣದ ಹಿಂದೆ ಹೋಗುತ್ತಿದ್ದಾರೆ ಎಂದು ವಿಷಾದಿಸಿದರು.

ಮಠಾಧೀಶರಾಗುವುದು ಹೂವಿನ ಹಾಸಿಗೆ ಅಲ್ಲ, ಮುಳ್ಳಿನ ಹಾಸಿಗೆ. ಇಂಥ ಸವಾಲಿನಲ್ಲಿ 50 ವರ್ಷದ ಹಿಂದೆ ಕಲ್ಲುಮಠವನ್ನು ಹಲವಾರು ಸವಾಲಿನ ನಡುವೆ ಅಭಿವೃದ್ಧಿಪಡಿಸಿರುವುದನ್ನು ಪ್ರಸ್ತಾವಿಕ ನುಡಿಯಲ್ಲಿ ಸ್ಮರಿಸಿದರು.

ಕರ್ನಾಟಕ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಶಂಕರ ಬಿದರಿ ಮಾತನಾಡಿ, ನಾಡಿನಲ್ಲಿ ಮಠಗಳ ಕೊಡುಗೆ ಅಪಾರ. ಆದರೆ ವಿಶ್ವಾದ್ಯಂತ ಲಿಂಗಾಯತ, ವೀರಶೈವ ಸಮಾಜದ ಜನರು 5 ಕೋಟಿಗಿಂತ ಹೆಚ್ಚು ಇದ್ದಾರೆ. ಆದರೆ ನಮ್ಮ ಸಮುದಾಯಕ್ಕೆ ಸರ್ಕಾರದಿಂದ ರಾಜಕೀಯವಾಗಿ, ಶೈಕಣಿಕವಾಗಿ, ಆರ್ಥಿಕವಾಗಿಯೂ ಸ್ಥಾನಮಾನಗಳು ದೊರೆತ್ತಿಲ್ಲ. ದೇಶದಲ್ಲಿ ಸಿಖ್, ಜೈನ ಮುಂತಾದ ಅಲ್ಪಸಂಖ್ಯಾತರ ಸಂಖ್ಯೆ ಕಡಿಮೆ ಇದ್ದರೂ ಆ ಸಮುದಾಯ ಅಭಿವೃದ್ಧಿಯಾಗುತ್ತಿದೆ. ಇದಕ್ಕೆ ನಮ್ಮ ಸಮುದಾಯದವರಲ್ಲಿ ಸಂಘಟಿತ ಕೊರತೆಯೇ ಕಾರಣವಾಗಿದೆ. ಇನ್ನಾದರೂ ಸಮುದಾಯ ಒಗ್ಗಟ್ಟಿನಿಂದ ಅಭಿವೃದ್ಧಿಪಡಿಸುವಂತೆ ಸಲಹೆ ನೀಡಿದರು.

ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿ, ಕಿರಿಕೊಡ್ಲಿ ಮಠದ ಶ್ರೀ ಸದಾಶಿವಸ್ವಾಮೀಜಿ, ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಸ್ವಾಗತ ಸಮಿತಿ ಅಧ್ಯಕ್ಷ ವಿದ್ಯಾಶಂಕರ್, ಕಾರ್ಯದರ್ಶಿ ಎಸ್.ಮಹೇಶ್ ಇತರರು ಇದ್ದರು.

ಸಾಧಕರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net