

ಚಿತ್ರದುರ್ಗ: ಜಿಲ್ಲೆಯ ಹಲವು ಸನ್ನಿಧಾನಗಳಲ್ಲಿ, ಮಠಗಳಲ್ಲಿ, ಮನೆಗಳಲ್ಲಿ ಗುರುಪೂರ್ಣಿಮೆ ಮಹೋತ್ಸವವನ್ನು ಹಲವರು ಶ್ರದ್ಧಾ-ಭಕ್ತಿಯಿಂದ ಭಾನುವಾರ ಆಚರಿಸಿದರು.
ಗುರು ಬ್ರಹ್ಮ, ಗುರು ವಿಷ್ಣು, ಗುರು ದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ ಶ್ಲೋಕ ಪಠಿಸುವ ಮೂಲಕ ದೇವರಿಗೆ, ನೆಚ್ಚಿನ ಗುರುವಿಗೆ, ತಂದೆ-ತಾಯಂದಿರಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದರು.
ಅನಾದಿ ಕಾಲದಿಂದ ಆಧುನಿಕ ಕಾಲದಲ್ಲೂ ಅಜ್ಞಾನದಿಂದ ಸುಜ್ಞಾನದ ಕಡೆಗೆ ಕರೆದೊಯ್ಯುವ ಗುರು-ಹಿರಿಯರ, ಪಾಲಕರ, ಶಿಕ್ಷಕರ ಪಾದ ಪೂಜೆ ಮಾಡುವ ಪರಂಪರೆ ಮುಂದುವರೆದಿದ್ದು, ಅದರಂತೆಯೇ ಹಲವೆಡೆ ಜರುಗಿತು.
ಸತ್ಯನಾರಾಯಣ ಸ್ವಾಮಿ ಪೂಜೆ: ಕೂಡಲೀ ಶೃಂಗೇರಿ ಶಾಖಾ ಮಠದ ತೃತೀಯ ಶ್ರೀ ಶಂಕರಭಾರತೀ ಸ್ವಾಮೀಜಿ ವೇದಿಕೆಯಲ್ಲಿ ಗುರುಪೂರ್ಣಿಮೆ ಅಂಗವಾಗಿ ಬೆಳಗ್ಗೆ 7.30ಕ್ಕೆ ಪಂಚಾಮೃತ ಸಹಿತ ರುದ್ರಾಭಿಷೇಕ, 9.30ಕ್ಕೆ ಮಹಾಮಂಗಳಾರತಿ, ನಂತರ ತೀರ್ಥ, ಪ್ರಸಾದ ವಿತರಿಸಲಾಯಿತು. ಸತ್ಯನಾರಾಯಣ ಸ್ವಾಮಿ ಪೂಜೆ ಬೆಳಗ್ಗೆ 10.30ಕ್ಕೆ ಆರಂಭವಾಗಿ 12ಕ್ಕೆ ಸಂಪನ್ನಗೊಂಡಿತು. ಆವರಣದಲ್ಲಿನ ಚಂದ್ರಮೌಳೇಶ್ವರ ಸ್ವಾಮಿ, ಶಾರದಾ ದೇವಿ, ಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಚಿಕ್ಕಪೇಟೆಯ ಗುರು ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲೂ ವ್ಯಾಸಪೂರ್ಣಿಮೆ ಅಂಗವಾಗಿ ವಿಶೇಷ ಆರಾಧನೆ ನೆರವೇರಿತು. ಸ್ವಾಮಿಯ ಮೂರ್ತಿಗೆ ಅಲಂಕಾರ ಸೇವೆ ನಡೆಯಿತು. ಇದೇ ವೇಳೆ ಭಕ್ತರು ತೀರ್ಥ, ಮಂತ್ರಾಕ್ಷತೆ ಆಶೀರ್ವಾದ ಪಡೆದರು. ಇಲ್ಲಿಯೂ ಸತ್ಯನಾರಾಯಣ ಸ್ವಾಮಿ ಪೂಜೆ ನೆರವೇರಿತು.
ದತ್ತಾತ್ರೇಯ ಸ್ವಾಮಿ ಆರಾಧನೆ: ಜಿಲ್ಲೆಯ ಹಲವು ಮನೆಗಳಲ್ಲಿ ದತ್ತಾತ್ರೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗುರು ಪೂರ್ಣಿಮೆ ಮಹೋತ್ಸವವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಿದರು. ವಿಶೇಷ ಖಾದ್ಯ ತಯಾರಿಸಿ ಎಡೆ ಸಮರ್ಪಿಸಿದರು.
ತ್ಯಾಗರಾಜ ಬೀದಿಯ ಪಾಂಡುರಂಗ ಸ್ವಾಮಿ ಸನ್ನಿಧಿಯಲ್ಲೂ ಪಾರಾಯಣದೊಂದಿಗೆ ಆಚರಿಸಲಾಯಿತು. ಇದೇ ವೇಳೆ ಗುರುಗಳನ್ನು ಸನ್ಮಾನಿಸಲಾಯಿತು.
ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ, ನೀಲಕಂಠೇಶ್ವರ ಸ್ವಾಮಿ, ಬರಗೇರಮ್ಮ, ಉಚ್ಚಂಗಿಯಲ್ಲಮ್ಮ ಸೇರಿ ಜಿಲ್ಲೆಯ ಅನೇಕ ದೇಗುಲಗಳಿಗೆ ಭಕ್ತರು ಭೇಟಿ ನೀಡಿ ದರ್ಶನ ಪಡೆದು, ಪೂಜೆ ಸಲ್ಲಿಸಿದರು. ಇಷ್ಟಾರ್ಥ ಸಿದ್ಧಿ, ಉತ್ತಮ ಮಳೆ-ಬೆಳೆಗಾಗಿ ಪ್ರಾರ್ಥಿಸಿಕೊಂಡರು.
ಸಾಯಿಬಾಬಾ ಸ್ವಾಮಿ ಆರಾಧನೆ: ಪ್ರತಿ ವರ್ಷದಂತೆ ಈ ಬಾರಿಯೂ ನಗರ ಸೇರಿ ಜಿಲ್ಲೆಯಲ್ಲಿನ ಸಾಯಿಬಾಬಾ ಮಂದಿರಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದವು. ಸ್ವಾಮಿಗೆ ವಿಶೇಷ ಪೂಜೆ, ಪುಷ್ಪಾಲಂಕಾರ ಸೇವೆ ಒಳಗೊಂಡು ಅನೇಕ ಪೂಜೆಗಳು ನೆರವೇರಿದವು. ಭಜನಾ ಮಹೋತ್ಸವದಲ್ಲೂ ಭಕ್ತರ ಸಂಖ್ಯೆ ಹೆಚ್ಚಿತ್ತು. ಬೆಳಗ್ಗೆಯಿಂದ ರಾತ್ರಿ 9.30ರವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಚಿತ್ರದುರ್ಗದಲ್ಲಿ ನಡೆದ ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ವಿವಿಧ ಶಾಲೆಗಳಲ್ಲಿ ಇಂದು: ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಜು. 22ರಂದು ಗುರುಪೂರ್ಣಿಮೆ ಆಚರಿಸಲು ತೀರ್ಮಾನಿಸಲಾಗಿದೆ. ಇದೇ ವೇಳೆ ತಟ್ಟೆಯೊಳಗೆ ಗುರುಗಳ, ಪಾಲಕರ ಪಾದಗಳನ್ನು ಇರಿಸಿ, ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಲು ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ.