ಮಠ ಶಂಕರಮಠದಲ್ಲಿ ಮೇ21ರಂದು ಉಚಿತ ನೇತ್ರ ತಪಾಸಣೆ: ಎಂ.ಎಸ್.ಶ್ರೀಕಂಠಯ್ಯ

ಮಠ ಶಂಕರಮಠದಲ್ಲಿ ಮೇ21ರಂದು ಉಚಿತ ನೇತ್ರ ತಪಾಸಣೆ: ಎಂ.ಎಸ್.ಶ್ರೀಕಂಠಯ್ಯ
Published on

ಹಾಸನ: ಶೃಂಗೇರಿ ಜಗದ್ಗುರು ಭಾರತೀತೀರ್ಥ ಮಹಾಸ್ವಾಮಿಗಳ ಸನ್ಯಾಸ ಸ್ವೀಕಾರದ 50ನೇ ವರ್ಷದ ಸುವರ್ಣ ವರ್ಷದ ಹಿನ್ನೆಲೆಯಲ್ಲಿ ‘ಸುವರ್ಣಭಾರತೀ ಮಹೋತ್ಸವ ಕಾರ್ಯಕ್ರಮದಲ್ಲಿ ಮೇ21ಮತ್ತು 22 ರಂದು ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ ಎಂದು ಶಂಕರಮಠದ ಧರ್ಮಾಧಿಕಾರಿ ಎಂ.ಎಸ್.ಶ್ರೀಕಂಠಯ್ಯ ತಿಳಿಸಿದರು.
ನಗರದ ಶ್ರೀ ಶಾರದ ಶೃಂಗೇರಿ ಮಠ ಶಂಕರಮಠ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವನಿವಾರಣಾ ಸಂಸ್ಥೆಗಳೂ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಜನರು ಇದರ ಸದುಪಯೋಗವನ್ನು ಪಡೆದುಕೊಳಬೇಕು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಗರದ ಶ್ರೀ ಶಂಕರಮಠದಲ್ಲಿ ಮೇ 21ಮಂಗಳವಾರ ಉಚಿತ ನೇತ್ರತಪಾಸಣೆ ನಡೆಯಲಿದ್ದು, ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದ್ದವರಿಗೆ ಮೇ22ರಂದು ಬೆಂಗಳೂರಿನ ಶ್ರೀ ಶಾರದಾ ಮತ್ತು ದಂತ ಚಿಕಿತ್ಸಾಲಯದಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಲಾಗುವುದು. ಈ ಆಸ್ಪತ್ರೆಯು ಶೃಂಗೇರಿ ಶಂಕರಮಠದ ಅಧೀನ ಸಂಸ್ಥೆಯಾಗಿದ್ದು, ಚಿಕಿತ್ಸಾವೆಚ್ಚ, ಸಾರಿಗೆ ವ್ಯವಸ್ಥೆ, ಊಟೋಪಚಾರ ಎಲ್ಲವೂ ಉಚಿತವಾಗಿರುತ್ತದೆ ಎಂದರು.
ವಿವಿಧ ಸಮಾಜೋಪಯೋಗಿ ಕಾರ್ಯಗಳು ದೇಶಾದ್ಯಂತ ವರ್ಷಪೂರ್ತಿ ಎಲ್ಲಾ ಶಾಖಾಮಠಗಳಲ್ಲಿಯೂ ಪ್ರದೇಶಾನುಗುಣವಾಗಿ ನಡೆಯಲಿದ್ದು, ಹಾಸನದಲ್ಲಿ ಮೊದಲ ಹಂತದಲ್ಲಿ ಈ ನೇತ್ರಚಿಕಿತ್ಸೆಯನ್ನು ಏರ್ಪಡಿಸಲಾಗಿದೆ. ಕಳೆದ ವರ್ಷ 12 ಜನರಿಗೆ ಉಚಿತ ಶಸ್ತ್ರಚಿಕಿತ್ಸೆಯನ್ನು ಪಡೆದಿದ್ದರು. 21ರಂದು ಬೆಳಗ್ಗೆ 9 ಗಂಟೆಯಿಂದ ನೋಂದಣಿ ಆರಂಭವಾಗಲಿದೆ. ಅನುಭವಿ ನೇತ್ರತಜ್ಞರ ತಂಡ ನೇತ್ರಪರೀಕ್ಷೆ ನಡೆಸಿ, ಶಸ್ತ್ರಚಿಕಿತ್ಸೆಗೆ ಅರ್ಹರನ್ನು ರೋಗಿಗಳನ್ನು ಬೆಂಗಳೂರಿಗೆ ಕರೆದೂಯ್ಯಲಾಗುವುದು ಇದರ ಸದ್ಬಳಕೆಯನ್ನು ಜಿಲ್ಲೆಯ ಜನತೆ ಪಡೆಯಬೇಕು ಎಂದು ಮನವಿ ಮಾಡಿದರು.
ಶಿಬಿರದ ಉಸ್ತುವಾರಿ ವಹಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ನಿರ್ದೇಶಕ, ಹಿರಿಯ ನೇತ್ರತಜ್ಞ ಡಾ. ಪಿ.ಎಲ್. ನಟರಾಜ್ ಮಾತನಾಡಿ, ಶಿಬಿರಕ್ಕೆ ಬರುವವರು ಆಧಾರ್ ಕಾರ್ಡ್ ಅಥವಾ ಅನ್ಯ ಗುರುತಿನ ಚೀಟಿ ತರಬೇಕು. ಮಧುಮೇಹ, ರಕ್ತದೊತ್ತಡ ಇತ್ಯಾದಿಗಳಿದ್ದು ಶಸ್ತ್ರಚಿಕಿತ್ಸೆಗೆ ಒಳಪಡುವುದಾದಲ್ಲಿ ಅದು ಹತೋಟಿಯಲ್ಲಿರುವಂತೆ ನೋಡಿಕೊಂಡಿರಬೇಕು. ಹಾಸನದಿಂದ ಬೆಂಗಳೂರಿಗೆ ಕರೆದೊಯ್ಯುವ, ಶಸ್ತ್ರಚಿಕಿತ್ಸಾ ನಂತರ ಕರೆತರುವ ವ್ಯವಸ್ಥೆಯನ್ನು ಶಂಕರಮಠವು ಮಾಡುತ್ತದೆ.ಔಷಧ, ಕನ್ನಡಕವನ್ನೂ ಸಹ ಒದಗಿಸಲಾಗುತ್ತದೆ. ಎಲ್ಲಾ ಚಿಕಿತ್ಸೆಗಳೂ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನದ ವ್ಯವಸ್ಥೆಯಲ್ಲೇ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 9844003434, 9844641800 ಅಥವಾ ಶಂಕರಮಠದ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಶಿಬಿರದ ಬಗ್ಗೆ ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net