ಮಠ-ಮಂದಿರಗಳ ಸೇವೆಗೆ ಸದಾ ಸಿದ್ದ

ydg03
Published on

ದೋರನಹಳ್ಳಿ: ದೇಶದ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿಕೊಂಡು ಬರುತ್ತಿರುವ ಮಠ-ಮಂದಿರಗಳ ಸೇವೆಗೆ ನಾನು ಸದಾ ಸಿದ್ಧ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.

ದಸರಾ ಮಹೋತ್ಸವ ನಿಮಿತ್ತ ಗ್ರಾಮದ ಶ್ರೀ ಶಾಂಭವಿಮಾತಾ ಚಿಕ್ಕಮಠದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮುತ್ತೆÊದೆಯರಿಗೆ ಉಡಿ ತುಂಬುವ ಹಾಗೂ ಧರ್ಮಸಭೆಯಲ್ಲಿ ಮಾತನಾಡಿದ ಅವರು, ರಾಜಕಾರಣದಲ್ಲಿ ಅಧಿಕಾರ ಬಂದು ಹೋಗುತ್ತದೆ. ಆದರೆ ಸದಾ ಉಳಿಯುವುದು ನಾವು ಮಾಡಿದ ಕೆಲಸ ಮಾತ್ರ. ನಮ್ಮ ಸಂಸ್ಕೃತಿ ಬಹಳ ವಿಶೇಷ ಮತ್ತು ವಿಶಿಷ್ಟವಾದದ್ದು. ಆದರೆ ಇಂದಿನ ಜನರು ಆಧುನಿಕತೆ ನೆಪದಲ್ಲಿ ಮರೆತು ಬಿಡುತ್ತಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಯುವ ನಾಯಕ ಮಹೇಶರಡ್ಡಿ ಮುದ್ನಾಳ್ ಮಾತನಾಡಿ, ಮಠ-ಮಂದಿರಗಳಿಗೆ ಬಂದಾಗ ನಾವು ಮಾತನಾಡದೆ ಸ್ವಾಮೀಜಿ, ಗುರುಗಳ ಆಶೀರ್ವಚನ ಆಲಿಸಬೇಕು. ಅವು ಮಾತು ಎಂದುಕೊAಡವರಿಗೆ ಬರೀ ಮಾತು. ಆದರೆ ಅವು ಜೀವನದ ಮಾರ್ಗದರ್ಶನ, ಆದರ್ಶ, ಸಂದೇಶ ಅಂದುಕೊAಡವರಿಗೆ ಅದ್ಭುತ ಶಕ್ತಿ ನೀಡುತ್ತವೆ ಎಂದರು.

ಆಶೀರ್ವಚನ ನೀಡಿದ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ, ಬದುಕು ಯಾರಿಗೆ ತಾನೆ ಬೇಡ? ಎಲ್ಲರಿಗೂ ಬೇಕಾಗಿದೆ. ಆದರೆ ನಾಲ್ವರಿಗೆ ಬೇಕಾಗುವಂತೆ ಬದುಕಬೇಕು. ಅಂಕಿ ಸಂಖ್ಯೆಯಲ್ಲಿ ಒಂಬತ್ತು ದೊಡ್ಡದಾದರೂ ನಾಲ್ಕು ಸಂಖ್ಯೆಯ ಪ್ರಾಮುಖ್ಯ ಅದಕ್ಕಿಂತಲೂ ದೊಡ್ಡದು. ಕಾರಣ ಜನಿಸಿದಾಗ ತೊಟ್ಟಿಲು ತೂಗಲು ನಾಲ್ಕು ಜನ ಬೇಕು, ಮರಣಿಸಿದಾಗ ಹೊತ್ತು ಸಾಗಿಸಲು ಸಹ ನಾಲ್ವರು ಬೇಕು. ಏನನ್ನು ಸಂಪಾದಿಸದಿದ್ದರೂ ಕೊನೆಯ ಪಕ್ಷ ನಾಲ್ಕು ಜನರನ್ನಾದರೂ ಸಂಪಾದಿಸು ನಿನ್ನ ಮಾಂಸದ ಮುದ್ದೆಗೆ ಮೋಕ್ಷ ನೀಡಲು ಎಂದು ಮಾರ್ಮಿಕವಾಗಿ ನುಡಿದರು.

ಶ್ರೀ ಮರುಳಮಹಾಂತ ಶಿವಾಚಾರ್ಯರು, ಶ್ರೀ ಮಡಿವಾಳ ದೇವರು ಆಶೀರ್ವಚನ ನೀಡಿದರು. ಪ್ರಮುಖರಾದ ಚಂದ್ರಶೇಖರ ಮಾಗನೂರ, ಡಾ.ಭೀಮಣ್ಣ ಮೇಟಿ ಮಾತನಾಡಿದರು. ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ಡಾ.ಚಂದ್ರಶೇಖರ ಸುಬೇದಾರ, ಡಾ.ಎಸ್.ಬಿ. ಕಾಮರಡ್ಡಿ, ವೀರಸಂಗಣ್ಣ ದೇಸಾಯಿ, ದೊಡ್ಡಪ್ಪ ದೇಸಾಯಿ, ತಮ್ಮಣ್ಣಗೌಡ ಜೋಳದ, ಜಟ್ಟೆಪ್ಪ ಬಿರಾಳ, ಹಯ್ಯಾಳಪ್ಪ ಗುಂಟನೂರ, ಹಳ್ಳೆಪ್ಪ ಹುಡೇದ್, ಸುರೇಶ ಪಸ್ಪೂಲ್, ಮಂಜುನಾಥ ಕಂಚಗಾರ, ವೀರೇಶ ಕಂಬಾರ, ಶಿವು ಜಂಗಳಿ, ಮಹೇಶ ಪತ್ತಾರ, ನಾಗರಾಜ ಅಣಿಬಿ, ಮಹಾಂತಯ್ಯ ಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net