ಮೇಟಿಕುರ್ಕೆ ಬಳಿ ಕೈಗಾರಿಕಾ ಕಾರಿಡಾರ್

METUKURKE hyr
Published on

ವಿಶೇಷ ಹಿರಿಯೂರು: ತಾಲೂಕಿನ ಮೇಟಿಕುರ್ಕೆ ಬಳಿ 1200 ಎಕರೆ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆಯಾಗಲಿದ್ದು, ಬಯಲುಸೀಮೆಯಲ್ಲಿ ಆರ್ಥಿಕ ಚಟುವಟಿಕೆ ಗರಿಗೆದರಲಿದ್ದು, ಉದ್ಯೋಗ ಅವಕಾಶಕ್ಕೆ ಬಹುದೊಡ್ಡ ಬಾಗಿಲು ತೆರೆದುಕೊಳ್ಳಲಿದೆ.

ಬೆಂಗಳೂರು-ತುಮಕೂರು ಬಳಿ ಕೈಗಾರಿಕೆಗಳು ಮಿತಿ ಮೀರಿದ್ದು, 2ನೇ ಹಂತದ ನಗರದಲ್ಲಿ ಕೈಗಾರಿಕೆ ಸ್ಥಾಪನೆಗೆ ಸರ್ಕಾರ ಹಸಿರು ನಿಶಾನೆ ತೋರಿದ್ದು, ಹಿರಿಯೂರಿನಲ್ಲಿ ಕೈಗಾರಿಕೆ ಸ್ಥಾಪನೆಗೆ ಪೂರಕವಾದ ಮೂಲ ಸೌಲಭ್ಯ ಸುಲಭವಾಗಿ ಲಭ್ಯವಾಗಲಿದೆ.

ನೀರು, ಭೂಮಿ ಲಭ್ಯತೆ ಆಧಾರದಲ್ಲಿ ಕೈಗಾರಿಕೆ ಸ್ಥಾಪನೆಯಾಗಲಿದ್ದು, ವಿವಿ ಸಾಗರ-ಗಾಯತ್ರಿ ಜಲಾಶಯ ಬಯಲುಸೀಮೆಗೆ ಪ್ರಕೃತಿ ಕೊಟ್ಟಿರುವ ವರ, ಭದ್ರೆ ವಿವಿ ಸಾಗರದ ಒಡಲು ಸೇರಿದ ನಂತರ ತಾಲೂಕಿನಲ್ಲಿ ಕೃಷಿ ಭೂಮಿಗೆ ಚಿನ್ನದ ಬೆಲೆ ಬಂದಿದೆ. ಜತೆಗೆ ಹಿರಿಯೂರಿನಲ್ಲಿ ಎರಡು ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದು, ದಾವಣಗೆರೆ-ತುಮಕೂರು ನೇರ ರೈಲು ಮಾರ್ಗ ಕಾಮಗಾರಿ ಪ್ರಗತಿಯಲ್ಲಿದ್ದು, ಮೇಟಿಕುರ್ಕೆ ಬಳಿ ಕೈಗಾರಿಕಾ ವಲಯ ಸ್ಥಾಪನೆಗೆ ವರದಾನವಾಗಲಿದೆ.

ಉದ್ಯೋಗ ಅವಕಾಶ: ತಾಲೂಕಿನ ಜೆ.ಜಿ.ಹಳ್ಳಿ ಬಳಿ ಈಗಾಗಲೇ ಟೆಕ್ಸ್‌ಟೈಲ್ಸ್ ಪಾರ್ಕ್ ಕೈಗಾರಿಕೆ ಆರಂಭವಾಗಿದ್ದು, ಹಿರಿಯೂರು-ಶಿರಾ ತಾಲೂಕಿನ ಸಾವಿರಾರು ಜನರಿಗೆ ಉದ್ಯೋಗ ಅವಕಾಶ ಸಿಕ್ಕಿದೆ. ಈ ಮಧ್ಯೆ ಮೇಟಿಕುರ್ಕೆ ಸಮೀಪ ಕೈಗಾರಿಕೆ ಸ್ಥಾಪನೆಯಿಂದ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆ ಚುರುಕುಗೊಳ್ಳಲಿದ್ದು, ಉದ್ಯೋಗ ಅವಕಾಶ ಹೆಚ್ಚಲಿದೆ. ಸಾರಿಗೆ-ಸಂಪರ್ಕ ವ್ಯವಸ್ಥೆ, ಮೂಲ ಸೌಕರ್ಯ ಅಭಿವೃದ್ಧಿಯಾಗಲಿದೆ.

ಸಚಿವರ ಪತ್ರ: ಮೇಟಿಕುರ್ಕೆ ಸಮೀಪ ಕೈಗಾರಿಕಾ ಕಾರಿಡಾರ್ ಸ್ಥಾಪನೆ ಸಂಬಂಧ ಜೂನ್ 6ರಂದು ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕರಿಗೆ ಬರೆದಿದ್ದ ಪತ್ರಕ್ಕೆ ವ್ಯತಿರಿಕ್ತವಾಗಿ ಆಗಸ್ಟ್ 7ರಂದು ಮತ್ತೊಂದು ಪತ್ರದ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರ ನಡೆ ಚರ್ಚೆಗೆ ಗ್ರಾಸವಾಗಿದೆ.

ಜೂನ್ 6ರ ಪತ್ರದಲ್ಲಿ, ಕೈಗಾರಿಕಾ ವಲಯ ಸ್ಥಾಪನೆ ಸಂಬಂಧ 1170ರಿಂದ 1200 ಎಕರೆ ಜಮೀನನ್ನು ಕೆಐಡಿಬಿ ವತಿಯಿಂದ ಭೂಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿರುವುದು ಕಂಡು ಬಂದಿರುತ್ತದೆ. ಈ ಜಮೀನುಗಳು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದು, ಇವುಗಳ ಮೌಲ್ಯ ಪ್ರತಿ ಎಕರೆಗೆ 45 ಲಕ್ಷ ರೂಪಾಯಿಗೂ ಹೆಚ್ಚು. ಈ ವಿಷಯವನ್ನು ತಿಳಿದಿರುವ ಕೆಲವು ರಿಯಲ್ ಎಸ್ಟೇಟ್ ದಲ್ಲಾಳಿಗಳು ಎಕರೆಗೆ 10ರಿಂದ 15 ಲಕ್ಷ ರೂ. ಬೆಲೆಗೆ ರೈತರಿಂದ ಜಿಪಿಎ/ಅಗ್ರೀಮೆಂಟ್ ಮೂಲಕ ಖರೀದಿಸಿ ಸರ್ಕಾರಕ್ಕೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿರುತ್ತದೆ ಎಂದು ತಿಳಿಸಿದ್ದರು.

ದಲ್ಲಾಳಿಗಳ ಮಧ್ಯ ಪ್ರವೇಶದಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ ಅನ್ಯಾಯವಾಗುತ್ತಿದ್ದು, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ 150ರಿಂದ 200 ಕೋಟಿಯಷ್ಟು ಅವ್ಯವಹಾರ ನಡೆದಿರುತ್ತದೆ. ಅಲ್ಲದೆ ಕೈಗಾರಿಕಾ ವಲಯ ಸ್ಥಾಪನೆಗೆ ಆಯ್ಕೆ ಮಾಡಿಕೊಂಡಿರುವ ಭೂಮಿ ಸಂಪೂರ್ಣವಾಗಿ ಕಪ್ಪು-ಜೇಡಿ ಮಣ್ಣಿನಿಂದ ಕೂಡಿದ್ದು, ಸದರಿ ಜಮೀನುಗಳು ಕೃಷಿಗೆ ಯೋಗ್ಯವಾಗಿದ್ದು, ಕೈಗಾರಿಕಾ ವಸಾಹತುಗಳ ನಿರ್ಮಾಣ ಕಾಮಗಾರಿಗೆ ಸೂಕ್ತವಾಗಿರುವುದಿಲ್ಲ. ಮತ್ತು ಈ ಭಾಗದಲ್ಲಿ ಸ್ಥಾಪನೆಯಾಗುವ ಕೈಗಾರಿಕಾ ಕಂಪನಿಗಳ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿರುವುದಿಲ್ಲ. ಪ್ರಯುಕ್ತ ಈ ಅಂಶಗಳನ್ನು ಪರಿಗಣಿಸಿ, ಕೈಗಾರಿಕಾ ವಲಯ ಸ್ಥಾಪನೆ ಉದ್ದೇಶವನ್ನು ಕೈಬಿಡಬೇಕಾಗಿ ಕೋರುತ್ತೇನೆ ಎಂದು ಸಚಿವರು ತಮ್ಮ ಪತ್ರದಲ್ಲಿ ತಿಳಿಸಿದ್ದರು.

*ಬದಲಾದ ನಿಲುವು: ಆಗಸ್ಟ್ 7ರಂದು ಸಚಿವರು ಎರಡನೇ ಪತ್ರ ಬರೆದಿದ್ದು, ಮೇಟಿಕುರ್ಕೆ ಸುತ್ತಮುತ್ತ ಕೈಗಾರಿಕಾ ವಲಯ ಸ್ಥಾಪನೆಗೆ 1200 ಎಕರೆ ಜಮೀನನ್ನು ಕೆಐಡಿಬಿ ಪಡಿಸಿಕೊಳ್ಳುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಕೈಗಾರಿಕಾ ವಸಾಹತುಗಳ ನಿರ್ಮಾಣಕ್ಕೆ ನಿಗದಿಪಡಿಸಿರುವ ಜಾಗದಲ್ಲಿಯೇ ತುರ್ತಾಗಿ ಕೈಗಾರಿಕಾ ಕಂಪನಿಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲು ಕೋರಿದೆ ಎಂದು ಸಂಕ್ಷಿಪ್ತವಾಗಿ ಹೇಳಲಾಗಿದೆ.

ಕೈಗಾರಿಕಾ ವಸಾಹತು ಪ್ರದೇಶ ಸ್ಥಾಪನೆ ಉದ್ದೇಶವನ್ನು ಕೈಬಿಡಬೇಕಾಗಿ ಸಚಿವರು ಬರೆದಿದ್ದ ಪತ್ರದ ಹಿಂದೆ ಇದ್ದ ಒತ್ತಡ ಯಾವುದು, ಎರಡು ತಿಂಗಳ ನಂತರ ಮೊದಲಿದ್ದ ಜಾಗದಲ್ಲಿಯೇ ಕಾರಿಡಾರ್ ಸ್ಥಾಪನೆಗೆ ಕ್ರಮ ವಹಿಸಿ ಎಂದು ಮರುಪತ್ರ ಬರೆಯಲು ಕಾರಣಗಳೇನು ಎಂಬುದು ಮಾತ್ರ ನಿಗೂಢ.

ಸಚಿವರ ಅಭಿಪ್ರಾಯ: ಮೇಟಿಕುರ್ಕೆ ಬಳಿ ಕೈಗಾರಿಕಾ ವಲಯ ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ, ದಲ್ಲಾಗಳಿಗೆ ಕಡಿವಾಣ ಹಾಕಲು, ರೈತರಿಗೆ ಸೂಕ್ತ ಪರಿಹಾರಕ್ಕಾಗಿ ಪತ್ರ ಬರೆಯಲಾಗಿತ್ತು, ಗೊಂದಲ ನಿವಾರಣೆಯಾಗಿದೆ. ರೈತರಿಗೆ ಅನ್ಯಾಯ ಆಗದಂತೆ ಕ್ರಮಕೈಗೊಳ್ಳಲಾಗುವುದು. ಕೈಗಾರಿಕೆ ಸ್ಥಾಪನೆ ಜಿಲ್ಲೆಯ ಜನತೆಗೆ ವರದಾನವಾಗಲಿದೆ ಎನ್ನುತ್ತಾರೆ ಜಿಲ್ಲಾ ಸಚಿವ ಡಿ.ಸುಧಾಕರ್

ಮಾಜಿ ಶಾಸಕಿ ಅನಿಸಿಕೆ: ಕೈಗಾರಿಕೆ ವಲಯ ಸ್ಥಾಪನೆಗೆ ಅನುಮೋದನೆ ನೀಡಿದ್ದು ಬಿಜೆಪಿ ಸರ್ಕಾರ. ಜಿಲ್ಲಾ ಸಚಿವರು ಪತ್ರದ ಮೂಲಕ ಗೊಂದಲ ಸೃಷ್ಟಿಸುತ್ತಿರುವುದು ದುರಂತ. ಬಿಜೆಪಿ ಸರ್ಕಾರದ ಜನಪರ ಕೆಲಸ, ಅಭಿವೃದ್ಧಿ ಯೋಜನೆ, ಸೌಲಭ್ಯಗಳನ್ನು ಜನರಿಗೆ ತಲುಪಿಸಲು ಸಚಿವರು ಬದ್ಧತೆ ಪ್ರದರ್ಶಿಸಬೇಕು. ರೈತರ ಭೂಮಿಗೆ ನ್ಯಾಯಯುತ ಪರಿಹಾರಕ್ಕಾಗಿ ಅಂದು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಎಕರೆಗೆ 25 ಲಕ್ಷ ರೂ. ಪರಿಹಾರ ನಿಗದಿಪಡಿಸಲಾಗಿತ್ತು ಎನ್ನುತ್ತಾರೆ ಮಾಜಿ ಶಾಸಕಿ ಕೆ.ಪೂರ್ಣಿಮಾ.

ರೈತಮುಖಂಡನ ಅಭಿಪ್ರಾಯ: ರೈತರ ಭೂಮಿಗೆ ಹೆಚ್ಚಿನ ಬೆಲೆ ನೀಡಬೇಕು, ರೈತರಿಗೆ ಪೂರಕವಾದ ಕೈಗಾರಿಕೆ ಸ್ಥಾಪನೆ, ಕೃಷಿ ಉತ್ಪನ್ನಕ್ಕೆ ಪ್ರೋತ್ಸಾಹ ನೀಡಬೇಕು. ಭೂಮಿ ಕಳೆದುಕೊಳ್ಳುವ ಹಾಗೂ ಸ್ಥಳೀಯರಿಗೆ ಉದ್ಯೋಗ ಮೀಸಲು ಕಲ್ಪಿಸಬೇಕು. ಪರಿಸರ ಸ್ನೇಹಿ ಕೈಗಾರಿಕೆ ವಲಯ ನಿರ್ಮಾಣ ಮಾಡಬೇಕು ಎನ್ನುತ್ತಾರೆ ಜಿಲ್ಲಾ ರೈತ ಸಂಘ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net