

ಹುಬ್ಬಳ್ಳಿ: ನವನಗರದ ಕ್ಯಾನ್ಸರ್ ಆಸ್ಪತ್ರೆ ಕ್ಯಾಂಪಸ್ನಲ್ಲಿರುವ ಮಜೇಥಿಯಾ ಫೌಂಡೇಷನ್ನ ರಮಿಲಾ ಪ್ರಶಾಂತಿ ಮಂದಿರದಲ್ಲಿ ಜೂ. 25ರಂದು ಬೆಳಗ್ಗೆ 11 ಗಂಟೆಗೆ ಜಾಗತಿಕ ಶಸ್ತ್ರಚಿಕಿತ್ಸಾ ದಿನದ ನಿಮಿತ್ತ ಶಸ್ತ್ರಚಿಕಿತ್ಸೆ ತಜ್ಞರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ರಮಿಲಾ ಪ್ರಶಾಂತಿ ಮಂದಿರದ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜರಾವ್ ಸಾನು ಹೇಳಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಸ್ತ್ರಚಿಕಿತ್ಸೆಯು ಮನುಷ್ಯ ಆರೋಗ್ಯ ರಕ್ಷಣೆಯಲ್ಲಿ ಅತ್ಯಂತ ಮಹತ್ವದ ಚಿಕಿತ್ಸಾ ಕ್ರಮವಾಗಿದೆ. ಸಕಾಲದಲ್ಲಿ ಶಸ್ತ್ರಚಿಕಿತ್ಸೆ ಸೌಲಭ್ಯ ಲಭ್ಯವಾದರೆ ಜಗತ್ತಿನಲ್ಲಿ ವರ್ಷದಲ್ಲಿ 18 ದಶಲಕ್ಷ ಜೀವಗಳನ್ನು ಉಳಿಸಬಹುದು ಎಂದು ಲ್ಯಾನ್ಸೆಟ್ ಪಬ್ಲಿಕೇಶನ್ ವರದಿ ಮಾಡಿದೆ. ಇದನ್ನು ತಪ್ಪಿಸಲು ಅಪಘಾತ, ಹೃದಯಾಘಾತ, ಇನ್ನಿತರ ತುರ್ತು ಸಂದರ್ಭದಲ್ಲಿ ರೋಗಿಗಳನ್ನು 2 ತಾಸಿನೊಳಗೆ ಶಸ್ತ್ರಚಿಕಿತ್ಸೆಗೆ ಒಳಪಡಿಸುವ ವ್ಯವಸ್ಥೆ ರೂಪಿಸಬೇಕಿದೆ. ಬಡವರಿಗೆ ಹಾಗೂ ಗ್ರಾಮೀಣ ಭಾಗದವರಿಗೆ ಇದು ಮರಿಚಿಕೆಯಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಜನರಲ್ಲಿ, ವೈದ್ಯರಲ್ಲಿ, ಸರ್ಕಾರಕ್ಕೆ ಅರಿವು ಮೂಡಿಸುವ ಉದ್ದೇಶದಿಂದ ಜೂ. 25ರಂದು ಜಾಗತಿಕ ಶಸ್ತ್ರಚಿಕಿತ್ಸಾ ದಿನ ಆಚರಿಸಲಾಗುತ್ತಿದೆ. ಹಿರಿಯ ಶಸ್ತ್ರಚಿಕಿತ್ಸಾ ತಜ್ಞ ಡಾ. ರವಿ ಕಲಘಟಗಿ ಭಾಗವಹಿಸುವರು. ಕಿಮ್ಸ್ ನಿವೃತ್ತ ನಿರ್ದೇಶಕ ಡಾ. ಮಲ್ಲಿಕಾರ್ಜುನ ದೇಸಾಯಿ, ಶಸ್ತ್ರಚಿಕಿತ್ಸಕರಾದ ಡಾ. ವಿ.ಇ. ಗಡಗಿ, ಡಾ. ಬಿ.ಆರ್. ಪಾಟೀಲ, ಡಾ. ಗುರುಶಾಂತಪ್ಪ ಯಲಗಚ್ಚಿನ, ಡಾ. ಈಶ್ವರ ಹೊಸಮನಿ, ಡಾ. ಆರ್. ಬಿ. ಮಗದೂರ, ಡಾ. ಶಶಿಧರ ಕೆ., ಡಾ. ಶ್ರೀನಿವಾಸ ಪೈ, ಡಾ. ವಿವೇಕ ಯಳಮಲಿ, ಡಾ. ಅಶೋಕ ಕಲಮದಾನಿ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಜೇಥಿಯಾ ಫೌಂಡೇಷನ್ ಟ್ರಸ್ಟಿ ಪ್ರಹ್ಲಾದ ರಾವ್, ಸಿಇಒ ಅಜೀತ ಕುಲಕರ್ಣಿ, ಅಮರೇಶ ಹಿಪ್ಪರಗಿ, ಡಾ. ವಿ.ಬಿ. ನಿಟಾಲಿ ಇದ್ದರು.