

ಶ್ರೀನಿವಾಸಪುರ: ಹಣ್ಣುಗಳ ರಾಜ ಎಂದೇ ಹೆಸರುವಾಸಿಯಾಗಿರುವ ಮಾವಿಗೆ ಈ ಬಾರಿ ಮಚ್ಚೆ ರೋಗ ವ್ಯಾಪಾಕವಾಗಿದ್ದು, ಪ್ರತಿ ಮಂಡಿಗಳಲ್ಲಿ ನೂರಾರು ಕ್ವಿಂಟಾಲ್ ಕೊಳೆತ ಮಾವಿನ ಕಾಯಿಗಳನ್ನು ಎಸೆಯುವ ಸ್ಥಿತಿ ನಿರ್ಮಾಣವಾಗಿದೆ.
ಬೆಲೆ ಕುಸಿತದ ಜತೆಗೆ ಈ ಬಾರಿ ಮಾವಿಗೆ ಮಚ್ಚೆ ರೋಗ ಕಾಣಿಸಿಕೊಂಡಿದೆ. ರೈತರು ಕಾಯಿ ಕಿತ್ತು ಮಾರುಕಟ್ಟೆಗೆ ತಂದಾಗ ಕೊಳೆತ ಮತ್ತು ಮಚ್ಚೆ ಇರುವ ಕಾಯಿಗಳನ್ನು ಮಂಡಿ ಮಾಲೀಕರು ಬೇರ್ಪಡಿಸಿ ಮಂಡಿಗಳ ಪಕ್ಕದಲ್ಲೇ ರಾಶಿ-ರಾಶಿ ಹಾಕಿರುವುದರಿಂದ ಇಡೀ ಮಾರುಕಟ್ಟೆ ಆವರಣ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ಕೊಳೆತ ಮಾವಿನ ಹಣ್ಣು ಮತ್ತು ಕಾಯಿಗಳ ರಾಶಿ ಕಾಣುತ್ತದೆ.
ಪಟ್ಟಣಕ್ಕೆ ಹೊಂದಿ ಕೊಂಡಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸುತ್ತಮುತ್ತಲಿರುವ ರಸ್ತೆಗಳಲ್ಲಿ ಕೊಳೆತ ಮಾವು ಎಸೆದಿದ್ದರಿಂದ ಪಟ್ಟಣದಲ್ಲಿ ದುರ್ವಾಸನೆ ಬರುತ್ತಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಕೆಲ ಮಂಡಿಯವರು ಕೊಳೆತ ಮಾವನ್ನು ಟ್ರ್ಯಾಕ್ಟರ್‌ಗಳ ಮೂಲಕ ಮಾರುಕಟ್ಟೆಯ ಪಕ್ಕದಲ್ಲಿರುವ ಚಿಂತಾಮಣಿ ರಸ್ತೆಯುದ್ದಕ್ಕೂ ಸುರಿಯುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ.
ಗಾಳಿಗೆ ತೂರಿದ ಡಿಸಿ ಆದೇಶ: ಮಾರುಕಟ್ಟೆ ಪ್ರಾರಂಭಕ್ಕೂ ಮುನ್ನ ಜಿಲ್ಲಾಧಿಕಾರಿಗಳು ಮಂಡಿ ಮಾಲೀಕರೊಂದಿಗೆ ನಡೆಸಿದ ಸಭೆಯಲ್ಲಿ ಕೊಳೆತ ಮಾವನ್ನು ಮಂಡಿಗಳ ಪಕ್ಕ ಎಸೆಯಬಾರದು, ಎಪಿಎಂಸಿ ಆಡಳಿತ ಮಂಡಳಿ ಹಾಗೂ ಪುರಸಭೆ ಜಂಟಿಯಾಗಿ ಕೊಳೆತ ಮಾವನ್ನು ಸಾಗಿಸುವ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದರು. ಆದರೆ ಈ ಎಲ್ಲ ಆದೇಶಗಳನ್ನು ಗಾಳಿಗೆ ತೂರಿದ ಮಂಡಿ ಮಾಲೀಕರು ಎಪಿಎಂಸಿ ಪ್ರಾಂಗಣ ಮತ್ತು ಸುತ್ತ-ಮುತ್ತಲಿನ ರಸ್ತೆಗಳಲ್ಲೇ ಸುರಿಯುತ್ತಿದ್ದಾರೆ. ಕೊಳೆತ ಮಾವನ್ನು ರಸ್ತೆಯಲ್ಲಿ ಸುರಿಯುತ್ತಿದ್ದರೂ ಎಪಿಎಂಸಿ ಆಡಳಿತ ಮಂಡಳಿ ಮತ್ತು ಪುರಸಭೆ ಕಂಡೂ ಕಾಣದಂತೆ ವರ್ತಿಸುತ್ತಿದೆ.
ಮಾವಿನ ಕಾಯಿಗೆ ಮಚ್ಚೆ ರೋಗ ಕಾಣಿಸಿಕೊಂಡಿದ್ದರೂ ರೈತರು ಮರಗಳಲ್ಲಿ ಕಾಯಿ ಉದುರಿಸಿ ತರುತ್ತಿರುವುದರಿಂದ ಮಂಡಿಗಳಲ್ಲಿ ಕೊಳೆತ ಹಾಗೂ ಕಳಪೆ ಮಾವನ್ನು ಹೊರಕ್ಕೆ ಹಾಕುತ್ತಿದ್ದಾರೆ. ಎಪಿಎಂಸಿ ಆವರಣದಲ್ಲಿ ಬೀಳುತ್ತಿರುವ ಕೊಳೆತ ತ್ಯಾಜ್ಯವನ್ನು ದಿನಕ್ಕೆ 30 ಟಿಪ್ಪರ್ ಲೋಡ್‌ಗಳಂತೆ ಹೊರ ಸಾಗಿಸಲಾಗುತ್ತಿದೆ. ಮಂಡಿ ಮಾಲೀಕರಿಗೆ ನೋಟಿಸ್ ಕೊಟ್ಟರೂ ಮಂಡಿ ಪಕ್ಕದಲ್ಲೇ ಎಸೆಯುತ್ತಿದ್ದಾರೆ. ಎಪಿಎಂಸಿ ಅಕ್ಕ-ಪಕ್ಕ ಖಾಸಗಿ ಮಂಡಿ ತಲೆ ಎತ್ತಿದ್ದು ಅಲ್ಲಿ ಬೀಳುವ ತ್ಯಾಜ್ಯವನ್ನು ರಸ್ತೆ ಹಾಗೂ ಎಪಿಎಂಸಿ ಸುತ್ತ ಸುರಿಯುತ್ತಿದ್ದಾರೆ. ರಮೇಶ್‌ಬಾಬು ಎಪಿಎಂಸಿ ಅಧ್ಯಕ್ಷ ಶ್ರೀನಿವಾಸಪುರ ಈ ವರ್ಷ ಹವಾಮಾನ ವೈಪರಿತ್ಯದಿಂದ ತೇವಾಂಶ ಹೆಚ್ಚಾಗಿ ಮಚ್ಚೆ ರೋಗ ಕಾಣಿಸಿಕೊಂಡಿದೆ. ಮೂರು ಹಂತಗಳಲ್ಲಿ ಹೂ ಬಿಟ್ಟು ಕಚ್ಚಿದ ಕಾಯಿಗಳನ್ನು ಮಾರುಕಟ್ಟೆಗೆ ಒಂದೇ ಹಂತದಲ್ಲಿ ತಂದ ಕಾರಣ ಮೊದಲ ಹಂತದಲ್ಲಿ ಬಿಟ್ಟ ಕಾಯಿಗಳಲ್ಲಿ ನೀರಿನಾಂಶ ಹೆಚ್ಚಾಗಿ ಮಚ್ಚೆ ರೋಗ ಬಂದಿದೆ. ಚಿನ್ನಪ್ಪರೆಡ್ಡಿ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಎಪಿಎಂಸಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೊಳೆತ ಮಾವಿನ ರಾಶಿ ತೆರವು ಮಾಡಲು ಮಂಡಿ ಮಾಲೀಕರಿಗೆ ಸೂಚನೆ ನೀಡಿ, ಕೊಳೆತ ಹಣ್ಣನ್ನು ಆವರಣದಲ್ಲಿ ಹಾಕದಂತೆ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ. ಶ್ರೀನಿವಾಸ್ ತಹಸೀಲ್ದಾರ್, ಶ್ರೀನಿವಾಸಪುರ