ಮಚ್ಚಿನಿಂದ ಹಲ್ಲೆ ಮಾಡಿದವನಿಗೆ 4 ವರ್ಷ ಜೈಲು ಶಿಕ್ಷೆ

18 smg manusingh
Published on

ಶಿವಮೊಗ್ಗ: ಜಗಳ ಬಿಡಿಸಲು ಹೋದ ಯುವಕನಿಗೆ ಮಚ್ಚಿನಿಂದ ತಲೆ ಮತ್ತು ಕೈಬೆರಳಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದವನಿಗೆ 4ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯವು 4 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿದೆ.

ಭದ್ರಾವತಿ ತಾಲೂಕಿನ ಸೀಗೇಬಾಗಿಯ ಮನುಸಿಂಗ್ (20) ಶಿಕ್ಷೆಗೆ ಒಳಗಾದವ. ಈತ 2018ರ ಸೆ.24ರಂದು ಸೀಗೇಬಾಗಿಯಲ್ಲಿ ಚೇತನ್ (21) ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಅಂದು ಮಧ್ಯಾಹ್ನ ಚೇತನ್ ಅವರ ದೊಡ್ಡಮ್ಮನೊಂದಿಗೆ ಅದೇ ಗ್ರಾಮದ ಶಿವರುದ್ರಪ್ಪ ಅಲಿಯಾಸ್ ಶಿವು ಎಂಬುವರು ಹಳೇ ದ್ವೇಷದಿಂದ ಜಗಳ ಮಾಡುತ್ತಿದ್ದ. ಈ ವೇಳೆ ಚೇತನ್ ಜಗಳ ಬಿಡಿಸಲು ಹೋದಾಗ ಮನುಸಿಂಗ್ ಮಚ್ಚಿನಿಂದ ಹಲ್ಲೆ ನಡೆಸಿದ್ದ. ಭದ್ರಾವತಿ ಹಳೇನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖಾಧಿಕಾರಿಯಾಗಿದ್ದ ಅಂದಿನ ಪಿಎಸ್‌ಐ ಡಿ.ಆರ್.ಭರತ್‌ಕುಮಾರ್ ಅವರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ಬುಧವಾರ ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್.ವೈ.ಶಶಿಧರ ಅವರು ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮನುಸಿಂಗ್‌ಗೆ ಸಾಧಾ ಕಾರಾವಾಸ ಮತ್ತು ದಂಡ ವಿಧಿಸಿದ್ದರು. ದಂಡ ಕಟ್ಟಲು ವಿಫಲನಾದಲ್ಲಿ 6 ತಿಂಗಳು ಸಾಧಾ ಕಾರಾವಾಸ ಶಿಕ್ಷೆ ನೀಡಿ ಆದೇಶ ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ರತ್ನಮ್ಮ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net