ಮಚ್ಚಿನಿಂದ ಕೊಚ್ಚಿ ಪತ್ನಿ ಹತ್ಯೆ

6blrp1
ಪತಿ ಪತ್ನಿಯನ್ನು ಕೊಲೆಗೈದ ಸ್ಥಳವನ್ನು ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್, ಪಿಎಸ್‌ಐ ಸುರೇಶ್ ಪರಿಶೀಲಿಸಿದರು.
Published on

ಬೇಲೂರು: ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಚೀಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಕಾಫಿ ತೋಟಕ್ಕೆ ಕೆಲಸಕ್ಕೆ ತೆರಳುತ್ತಿದ್ದ ಪತ್ನಿಯನ್ನು ಪತಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

ಇಂದ್ರಮ್ಮ (50)ಹತ್ಯೆಯಾದ ಮಹಿಳೆ. ಗ್ರಾಮದ ಚಂದ್ರಯ್ಯ ಕೊಲೆಗೈದ ಆರೋಪಿಯಾಗಿದ್ದು ತಲೆಮರೆಸಿಕೊಂಡಿದ್ದಾನೆ. ಬೆಳಗ್ಗೆ ಬೇಲೂರು ತಾಲೂಕಿನ ಚೀಕನಹಳ್ಳಿ ಗ್ರಾಮದ ಕೇಶವಮೂರ್ತಿ ಎಂಬುವರ ಕಾಫಿ ತೋಟಕ್ಕೆ ಇಂದ್ರಮ್ಮ ಹಾಗೂ ಇತರ ಮೂವರು ಮಹಿಳೆಯರು ತೆರಳುತಿದ್ದರು. ಏಕಾಏಕಿ ಬಂದ ಚಂದ್ರಯ್ಯ, ಇಂದ್ರಮ್ಮಗೆ ದೊಣ್ಣೆಯಿಂದ ಹೊಡೆದಿದ್ದಾನೆ. ಜತೆಯಲ್ಲಿದ್ದ ಇತರ ಕೆಲಸಗಾರರು ಚಂದ್ರಯ್ಯ ಅವರನ್ನು ತಡೆದಿದ್ದಾರೆ. ಆದರೆ ಚಂದ್ರಯ್ಯ ತಕ್ಷಣ ಮಚ್ಚಿನಿಂದ ಅವರನ್ನು ಬೆದರಿಸಿ ಪಕ್ಕಕ್ಕೆ ತಳ್ಳಿದ್ದಾನೆ. ಅವರು ಭಯದಿಂದ ದೂರ ಓಡಿಹೋಗಿದ್ದಾರೆ. ತಕ್ಷಣ ಚಂದ್ರಯ್ಯ ಒಂದು ಕೈಯಲ್ಲಿ ಪತ್ನಿಯ ತಲೆ ಕೂದಲು ಹಿಡಿದು ಕುತ್ತಿಗೆ, ತಲೆ, ಕೈ ಕಾಲುಗಳಿಗೆ ಮಚ್ಚಿನಿಂದ ಮನಸೋಇಚ್ಛೆ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾನೆ.

ಕೊಲೆಗೆ ಏನು ಕಾರಣ ಎಂಬುದು ನಿಖರವಾಗಿ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ್ ಹಾಗೂ ಅರೇಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಮತ್ತು ಸಿಬ್ಬಂದಿ ಶ್ವಾನದೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೇಲೂರಿನ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಮೂವರು ಹೆಣ್ಣು, ಒಬ್ಬ ಪುತ್ರ ಗ್ರಾಮ ಪಂಚಾಯಿತಿ ಸದಸ್ಯ ಪ್ರದೀಪ್ ಇದ್ದಾರೆ.

ತಿಂಗಳ ಹಿಂದೆಯೇ ಸಂಚು ರೂಪಿಸಿದ್ದ: ಚಂದ್ರಯ್ಯ ಒಂದು ತಿಂಗಳ ಹಿಂದೆಯೇ ಪತ್ನಿ ಇಂದ್ರಮ್ಮನನ್ನು ಮನೆಯಲ್ಲಿಯೇ ಕೊಲೆ ಮಾಡಲು ಸಂಚು ರೂಪಿಸಿ ವಿಫಲನಾಗಿದ್ದ ಎಂದು ತಿಳಿದು ಬಂದಿದೆ. ಅಂದಿನಿಂದ ಇಂದಿನವರೆಗೂ ಒಂದೇ ಮನೆಯಲ್ಲಿ ವಾಸವಿದ್ದರೂ ಪತಿ, ಪತ್ನಿ ನಡುವೆ ಯಾವುದೇ ಮಾತುಕತೆ ಇರಲಿಲ್ಲ. ಮಕ್ಕಳು, ಸೊಸೆಯೊಂದಿಗೆ ಮಾತನಾಡುತಿದ್ದರು. ಮಂಗಳವಾರ ಬೆಳಗ್ಗೆ ತೋಟದ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಪತಿ ಚಂದ್ರಯ್ಯ ಪತ್ನಿ ಇಂದ್ರಮ್ಮನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net