

ಚನ್ನರಾಯಪಟ್ಟಣ: ಮಗ್ಗಿಯನ್ನು ಕ್ರಮಬದ್ಧವಾಗಿ ನಿತ್ಯ ಹೇಳುವುದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜೆ. ಸೋಮನಾಥ್ ಹೇಳಿದರು.
ತಾಲೂಕು ಹಿರೀಸಾವೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಇಂಗ್ಲಿಷ್ ಫೆಸ್ಟಿವಲ್ ಉದ್ಘಾಟಿಸಿ ಮಾತನಾಡಿದ ಅವರು, ಮಗ್ಗಿಯನ್ನು ಅಭ್ಯಾಸ ಮಾಡುವಾಗ ದೇಹದ ಒಳಗಿನ ಅಂಗಗಳ ವ್ಯಾಯಾಮ ಆಗುತ್ತದೆ ಮತ್ತು ಉಸಿರಾಟದ ಕ್ರಿಯೆ ಉತ್ತಮಗೊಳ್ಳುತ್ತದೆ. ಮನಸ್ಸಿನ ಏಕಾಗ್ರತೆ ಹೆಚ್ಚುತ್ತದೆ. ಮಿದುಳು ಚುರುಕಾಗುತ್ತದೆ ಎಂದರು.
ಶಿಕ್ಷಣ ಸಂಯೋಜಕ ರವೀಂದ್ರ ಮಾತನಾಡಿ, ಪ್ರಸ್ತುತ ಜಗತ್ತಿನಲ್ಲಿ ಇಂಗ್ಲಿಷ್ ಸಂಪರ್ಕ ಭಾಷೆಯಾಗಿದೆ. ಆದ್ದರಿಂದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಾತೃಭಾಷೆಯೊಂದಿಗೆ ಇಂಗ್ಲಿಷ್ ಭಾಷೆಯನ್ನೂ ಕಲಿಸಲಾಗುತ್ತಿದ್ದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಕಲಾ, ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಾಥಬಾಬು, ಸದಸ್ಯರಾದ ಗೋವಿಂದರಾಜು, ಮಧು, ಜ್ಯೋತಿ, ಕವಿತಾ, ಪವಿತ್ರ ಮತ್ತಿತರರು ಇದ್ದರು. ಇಂಗ್ಲಿಷ್ ಫೆಸ್ಟಿವಲ್ ಅಂಗವಾಗಿ ಏರ್ಪಡಿಸಿದ್ದ ಛದ್ಮವೇಷ ಸ್ಫರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಸಂಭ್ರಮಿಸಿದರು.