

ಬೆಳಗಾವಿ: ಮಗುವಿನ ಕೌಶಲಗಳ ಬೆಳವಣಿಗೆಯಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ತುಂಬಾ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಕನ್ನಡವನ್ನು ಕಟ್ಟುವ,ಬೆಳೆಸುವುದರ ಜತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಾಹಿತ್ಯವನ್ನು ಬೆಳೆಸುವ ಮಹೋನ್ನತ ಕಾರ್ಯದಲ್ಲಿ ತೊಡಗಿರುವ ವಿಶ್ವೇಶ್ವರಯ್ಯ ವಿವಿ ಸೇವೆ ಪ್ರಶಂಸನೀಯ ಎಂದರು.
ಮಂಗಳವಾರ ವಿತಾವಿ ಜ್ಞಾನ ಸಂಗಮ ಆವರಣದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಜತ ಮಹೋತ್ಸವ ವರ್ಷಾಚರಣೆ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿತಾವಿಯ ಪ್ರಸಾರಾಂಗ ವಿಭಾಗ ಯುವ ಬ್ರಿಗೇಡ್ ಸಹಯೋಗದಲ್ಲಿ ಜ್ಞಾನರಥ (ಲ್ಯಾಬ್ ಆನ್ ವೀಲ್ಸ್), ಜನಪ್ರಿಯ ತಾಂತ್ರಿಕ ಶಿಕ್ಷಣ ಮಾಲೆ ನಾಲ್ಕನೇ ಸರಣಿ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ವಿತಾವಿ ಕುಲಪತಿ ಪ್ರೊ. ಕರಿಸಿದ್ದಪ್ಪ ವಹಿಸಿದ್ದರು. ಕನ್ನಡ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ಡಾ.ಸಿ.ಕೆ.ಸುಬ್ಬರಾಯ,ಕುಲಸಚಿವರಾದ ಆನಂದ ದೇಶಪಾಂಡೆ, ಬಿ.ಇ. ರಂಗಸ್ವಾಮಿ, ಹಣಕಾಸು ಎಂ.ಎ.ಸಪ್ನಾ, ಡಾ. ರೋಹಿತ ಚಕ್ರತಿರ್ಥ ಇದ್ದರು. ಬಳಿಕ ಡಾ ಟಿ.ಆರ್. ಅನಂತರಾಮು ವಿಜ್ಞಾನ ಪ್ರತಿಷ್ಠಾನದಿಂದ ಪ್ರಕಟಣೆಗೊಳ್ಳುತ್ತಿದ್ದ ವಿಜ್ಞಾನ ಮಾಸಪತ್ರಿಕೆ ಸೂತ್ರಪತ್ರಿಕೆಯ ಪ್ರಕಟಣೆ ಹಕ್ಕನ್ನು ವಿತಾವಿ ಪ್ರಸಾರಂಗಕ್ಕೆ ಹಸ್ತಾಂತರಿಸಲಾಯಿತು.
ಜ್ಞಾನ ರಥದ ವಿಶೇಷತೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ತನ್ನ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ವೈಜ್ಞಾನಿಕ ಹಾಗೂ ಹೊಸ ತಂತ್ರಜ್ಞಾನಗಳ ಮಾಹಿತಿಯ ಜೊತೆಗೆ ಅವುಗಳು ವಿಜ್ಞಾನದ ಯಾವ ಮೂಲ ವಿಷಯಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ವೈಜ್ಞಾನಿಕ ಚಿಂತನೆಯನ್ನು ಬೆಳೆಸುವ ಉದ್ದೇಶದೊಂದಿಗೆ ವಿತಾವಿಯ ಕುಲಪತಿಗಳ ಆಶಯದಂತೆ, ವಿತಾವಿಯು ತನ್ನ ಹಳೆಯದಾದ ಬಸ್ಸನ್ನು ನವೀಕರಿಸಿ ಜ್ಞಾನರಥ ಎಂಬ ಹೆಸರಿನಡಿಯಲ್ಲಿ ಸಂಚಾರಿ ಪ್ರಯೋಗಾಲಯವನ್ನು ನಿರ್ಮಿಸಿದೆ. ಇದರ ಪ್ರತಿ ಭಾಗಗಳು ಒಂದೊಂದು ವಿಷಯಗಳನ್ನು ಕಲಿಸಿಕೊಡುತ್ತವೆ. ಈ ರಥದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ಮಾಹಿತಿಯನ್ನು ಮತ್ತು ಪ್ರಾಚೀನ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನವು ಎಷ್ಟೊಂದು ಶ್ರೀಮಂತವಾಗಿತ್ತು ಎಂಬುದನ್ನು ತಿಳಿಸಿ ಕೊಡುತ್ತದೆ. ಬಸ್ಸಿನ ಮೇಲ್ಭಾಗದಲ್ಲಿ ಬ್ರಹ್ಮಾಂಡದ ಅಧ್ಯಯನಕ್ಕೆ ಮೀಸಲಿಡಲಾಗಿದೆ. ಜನಪ್ರಿಯ ತಾಂತ್ರಿಕ ಶಿಕ್ಷಣ ಮಾಲೆಯ ನಾಲ್ಕನೇ ಸರಣಿಯ ಒಟ್ಟು 39 ಪುಸ್ತಕಗಳನ್ನು ಇಲ್ಲಿ ಬಿಡುಗಡೆಗೊಳಿಸಿ ಎಲ್ಲ ಲೇಖಕರನ್ನು ಸನ್ಮಾನಿಸಲಾಯಿತು. ಜ್ಞಾನ ರಥವು ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ, ವಿಜ್ಞಾನ ಹಾಗೂ ಗಣಿತ ವಿಷಯಗಳಿಗೆ ಸಂಬಂಧಿಸಿದ ಸುಮಾರು 20ಕ್ಕಿಂತ ಹೆಚ್ಚು ಪ್ರಯೋಗಗಳನ್ನು ಹೊಂದಿದೆ. ಈ ಪ್ರಯೋಗಾಲಯವು ಸಂಪೂರ್ಣವಾಗಿ ವಿದ್ಯುತ್ ಶಕ್ತಿ ಸ್ವಾವಲಂಬಿಯಾಗಿದ್ದು ಸೌರ ವಿದ್ಯುತ್ ಅಳವಡಿಸಲಾಗಿದೆ.
ವಿದ್ಯಾರ್ಥಿಗಳಿಗೆ ಅಂತರ್ಜಾಲದ ಮೂಲಕ ಉಪಯುಕ್ತ ಮಾಹಿತಿ ತೋರಿಸುವ ಒಂದು ಸ್ಮಾರ್ಟ್ ಟಿ.ವಿ.ಯನ್ನು ಅಳವಡಿಸಲಾಗಿದೆ. ಜಿ.ಪಿ.ಎಸ್ ಅಗ್ನಿ ಸುರಕ್ಷತಾ ವ್ಯವಸ್ಥೆ ಹಾಗೂ ಪ್ರಥಮ ಚಿಕಿತ್ಸೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಜ್ಞಾನರಥವು ಪ್ರಥಮ ಹಂತದಲ್ಲಿ ಬೆಳಗಾವಿ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಸಂಚರಿಸಲಿದೆ.