ಮಗುವಿನ ಬೆಳವಣಿಗೆಗೆ ತಾಯಿ ಹಾಲು ಸಹಕಾರಿ

21blrp2
ಬೇಲೂರು ತಾಲೂಕಿನ ಗೆಂಡೇಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಟರಿ ಕ್ಲಬ್‌ನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರೋಗ್ಯವಂತ ಶಿಶುವಿಗೆ ಬಹುಮಾನ ವಿತರಿಸಲಾಯಿತು.
Published on

ಬೇಲೂರು: ಶಿಶುಗಳು ಹುಟ್ಟಿದ ಮೊದಲ ತಿಂಗಳು ಜೀವಮಾನದ ಉತ್ತಮ ಆರೋಗ್ಯಕ್ಕೆ ಅಡಿಪಾಯದ ಅವಧಿಯಾಗಿದೆ. ಆರೋಗ್ಯವಂತ ಶಿಶುಗಳು ವಯಸ್ಕರಾಗಿ ಬೆಳೆದು, ತಮ್ಮ ಸಮುದಾಯ ಮತ್ತು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬಹುದು ಎಂದು ತಾಲೂಕಿನ ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಮತಾ ಹೇಳಿದರು.

ರೋಟರಿ ಕ್ಲಬ್ ಬೇಲೂರು ವಲಯ 8ರ ವತಿಯಿಂದ ತಾಲೂಕಿನ ಗೆಂಡೇಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬಾಣಂತಿ ಮತ್ತು ನವಜಾತ ಶಿಶು ಆರೈಕೆ ಮತ್ತು ಅರಿವು ಕಾರ್ಯಕ್ರಮದಲ್ಲಿ ಮತನಾಡಿದರು.

ತಾಯಿ ಹಾಲು ಪರಿಶುದ್ಧ, ಸುರಕ್ಷಿತ ಹಾಗೂ ಸರಿಯಾದ ಉಷ್ಣತೆ ಹೊಂದಿರುತ್ತದೆ. ಇದರಲ್ಲಿ ಸರಿ ಪ್ರಮಾಣದಲ್ಲಿ ಪೌಷ್ಟಿಕಾಂಶ ಇರುವುದರಿಂದ ಮಗುವಿನ ದೈಹಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ. ತಾಯಿ ಹಾಲು ಇತರ ಹಾಲಿಗಿಂತ ಸುಲಭವಾಗಿ ಜೀರ್ಣವಾಗಿ, ರೋಗ ನಿರೋಧಕಶಕ್ತಿ ಹೊಂದಿರುವುದರಿಂದ ಮಗುವಿಗೆ ಅತಿಸಾರ, ಕೆಮ್ಮು, ಕಫ ಇತ್ಯಾದಿ ಕಾಯಿಲೆ ಬರುವ ಸಾಧ್ಯತೆ ಕಡಿಮೆ. ಅಲ್ಲದೇ ತಾಯಿ ಹಾಲಿನಿಂದ ತಾಯಿ-ಮಗುವಿನ ಮಾನಸಿಕ ಬಾಂಧವ್ಯ ಹೆಚ್ಚಾಗುತ್ತದೆ. ಮಕ್ಕಳ ಬೆಳವಣಿಗೆಗೆ ಇದು ತುಂಬ ಸಹಕಾರಿಯಾಗಿದೆ. ತಾಯಿ ಹಾಲು ಉಣಿಸುವುದರಿಂದ ಹೆರಿಗೆಯ ನಂತರದ ರಕ್ತಸ್ರಾವ ಕಮ್ಮಿಯಾಗುತ್ತದೆ. ಮುಂದಿನ ಗರ್ಭಧಾರಣೆ ಮುಂದೂಡಲು ಸಹಾಯವಾಗುತ್ತದೆ. ಮಕ್ಕಳಲ್ಲಿ ಪ್ರತ್ಯೇಕವಾಗಿ ಅನೇಕ ಸೋಂಕು, ಮಲ ಬದ್ಧತೆ, ಅಲರ್ಜಿ, ಇಂತಹ ಸಾಕಷ್ಟು ರೋಗಗಳನ್ನು ತಡೆಗಟ್ಟಲು ಇದು ಸಹಾಯ ಮಾಡುತ್ತದೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಚಿದನ್ ಮಾತನಾಡಿ, ಬಾಣಂತಿಯರು ಪೌಷ್ಟಿಕ ಆಹಾರ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ಭಾರತದಂತಹ ದೇಶದಲ್ಲಿ ಪೌಷ್ಟಿಕಾಂಶದ ಕೊರತೆಯ ಅನೇಕ ಉದಾಹರಣೆಗಳಿವೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಕೆಲಸ ಮಾಡುತ್ತಿದೆ. ಈಗಾಗಲೇ ಪೋಲಿಯೋ ನಿರ್ಮೂಲನೆಗೆ ಕಳೆದ 40ಕ್ಕೂ ಹೆಚ್ಚು ವರ್ಷಗಳಿಂದ ಕೆಲಸ ಮಾಡಿ ಭಾರತ ಪೊಲೀಯೋ ಮುಕ್ತ ಎಂದು ಗುರುತಿಸಲು ಕಾರಣವಾಗಿದೆ. ಜತೆಗೆ ರೋಟರಿ ಕ್ಲಬ್ ಶಿಕ್ಷಣ ಮತ್ತು ಆರೋಗ್ಯದಂತಹ ವಿಷಯಗಳ ಬಗ್ಗೆ ಹೆಚ್ಚು ಕೆಲಸ ಮಾಡುತ್ತಿದೆ. ದೇಶದ ಮಕ್ಕಳು ಸುಶಿಕ್ಷಿತರಾಗುವ ಕಡೆಗೆ ಗಮನ ನೀಡಬೇಕು ಹಾಗೂ ಅವರ ಆರೋಗ್ಯದ ಬಗ್ಗೆಯೂ ಸಾಮಾಜಿಕವಾಗಿ ಕಾಳಜಿ ತೆಗೆದುಕೊಳ್ಳಬೇಕು ಎಂಬುದು ನಮ್ಮ ಕ್ಲಬ್‌ನ ಧ್ಯೇಯವಾಗಿದೆ ಎಂದರು.

ಮೂರು ಆರೋಗ್ಯವಂತ ಶಿಶುಗಳಿಗೆ ರೋಟರಿ ಕ್ಲಬ್ ಪದಾಧಿಕಾರಿಗಳು ಬಹುಮಾನ ನೀಡಿ ಪ್ರೋತ್ಸಾಹಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ವೈದ್ಯಾಧಿಕಾರಿ ಡಾ.ಸಂಕೇತ್, ರೋಟರಿ ಕ್ಲಬ್‌ನ ಜಯದೇವ, ಶಂಭೂಗೌಡ, ಮುರಳಿ, ಲೋಕೇಶ್, ಶ್ರೀಧರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net