ಮಗಳನ್ನೂ ಸೇರಿ ಮೂವರನ್ನು ಕೊಲೆಗೈದು ಆತ್ಮಹತ್ಯೆ

bhr moulya
ಮೌಲ್ಯಾ
Published on

ಬಾಳೆಹೊನ್ನೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ತೊರೆದು ಹೋಗಿದ್ದರಿಂದ ಬೇಸತ್ತ ಪತಿ ತನ್ನ ಪುಟಾಣಿ ಮಗಳನ್ನು ಸೇರಿದಂತೆ ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಿ, ತಾನೂ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ರಾತ್ರಿ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ ಮಾಗಲು ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೂ ಮುನ್ನ ಸೆಲ್ಫಿ ವೀಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾನೆ.

ಮಗಳು ಮೌಲ್ಯಾ(6), ಅತ್ತೆ ಜ್ಯೋತಿ (50), ನಾದಿನಿ ಸಿಂಧು (24) ಅವರನ್ನು ಕೊಲೆ ಮಾಡಿದ ರತ್ನಾಕರ್ ಗೌಡ (40) ಎಂಬಾತ

ನಾದಿನಿ ಗಂಡ ಅವಿನಾಶ್ (33)ಗೂ ಗುಂಡು ಹಾರಿಸಿದಾಗ ಕಾಲಿಗೆ ತಗುಲಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊನೆಗೆ ತಾನೂ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಳಸದ ರತ್ನಾಕರ್ ಗೌಡ ಸಂಗಮೇಶ್ವರಪೇಟೆಯ ಖಾಸಗಿ ಶಾಲೆ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಎಂಟು ವರ್ಷಗಳ ಹಿಂದೆ ಮಾಗಲು ಗ್ರಾಮದ ಸ್ವಾತಿಯನ್ನು ವಿವಾಹವಾಗಿದ್ದ ಈತನಿಗೆ ಮೌಲ್ಯಾ ಎಂಬ ಆರು ವರ್ಷದ ಮಗಳಿದ್ದು, ಎರಡು ವರ್ಷಗಳ ಹಿಂದೆ ಪತ್ನಿ, ಪತ್ನಿಯ ನಡುವೆ ಕೌಟುಂಬಿಕ ಕಲಹ ನಡೆದು ಪತ್ನಿ ಕುಟುಂಬವನ್ನು ತೊರೆದು ಬೇರೆಡೆಗೆ ಹೋಗಿ ವಾಸಿಸುತ್ತಿದ್ದಳು. ಪತ್ನಿ ದೂರಾದ ಬಳಿಕ ರತ್ನಾಕರ್ ಮಗಳನ್ನು ಪೋಷಿಸಿಕೊಂಡು ಬರುತ್ತಿದ್ದ. ಪತ್ನಿ ದೂರಾದ ಬಳಿಕ ಆಕೆಯ ತಾಯಿ ಮನೆಯವರೂ ರತ್ನಾಕರ್‌ನನ್ನು ದೂರವಿರಿಸಿದ್ದರು. ಈ ಬಗ್ಗೆ ಈತ ಆಕ್ರೋಶಗೊಂಡಿದ್ದ ಎನ್ನಲಾಗಿದೆ.

ಮಂಗಳವಾರ ರಾತ್ರಿ 10 ಗಂಟೆ ವೇಳೆಗೆ ರತ್ನಾಕರ್ ಮಗಳು ಮೌಲ್ಯಳೊಂದಿಗೆ ಬಂದೂಕು ಸಮೇತ ಅತ್ತೆಯ ಮನೆಗೆ ತೆರಳಿದ್ದು, ಮಗುವಿನ ಮೂಲಕ ಅತ್ತೆಯನ್ನು ಹೊರ ಬರಲು ಹೇಳಿಸಿದ್ದಾನೆ. ಅತ್ತೆ ಜ್ಯೋತಿ ಹೊರಬರುತ್ತಿದ್ದಂತೆ ಅವರಿಗೆ ರತ್ನಾಕರ್ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಬಳಿಕ ಮಗಳು, ನಾದಿನಿಗೂ ಗುಂಡು ಹಾರಿಸಿದ್ದಾನೆ. ನಾದಿನಿಯ ಪತಿ ಅವಿನಾಶ್ ಸಹ ಮನೆಯಲ್ಲಿಯೇ ಇದ್ದು ಗುಂಡಿನ ಸದ್ದು ಕೇಳಿ ಹೊರಬಂದಾಗ ಆತನಿಗೂ ಗುಂಡು ಹಾರಿಸಿದ್ದಾನೆ. ಮೌಲ್ಯಾ, ಜ್ಯೋತಿ, ಸಿಂಧು ಸ್ಥಳದಲ್ಲೇ ಮೃತಪಟ್ಟಿದ್ದು, ಅವಿನಾಶ್ ಅವರ ಕಾಲಿಗೆ ಗುಂಡು ತಗುಲಿದ ಪರಿಣಾಮ ಸಾವಿನಿಂದ ಪಾರಾಗಿದ್ದಾರೆ. ಅವರಿಗೆ ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಪ್ಪ ಹಾಗೂ ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗಳಲ್ಲಿ ನಾಲ್ಕು ಶವಗಳನ್ನು ಪ್ರತ್ಯೇಕವಾಗಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ರತ್ನಾಕರ್ ಗೌಡ ಸೆಲ್ಫಿ ವೀಡಿಯೋ ಮಾಡಿರುವುದರಲ್ಲಿ ನಾನು ಏಕೆ ಇಂಥ ಕೃತ್ಯ ಎಸಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಪತ್ನಿ ದೂರಾದ ಬಳಿಕ ಮಗಳು ನಿತ್ಯವೂ ತಾಯಿ ಬೇಕೆಂದು ಕೇಳುತ್ತಿದ್ದಳು. ಶಾಲೆಯಲ್ಲಿ ಆಕೆಯ ಸಹಪಾಠಿಗಳು ಸಹ ನಿನ್ನ ಅಮ್ಮ ಎಲ್ಲಿ ಎಂದು ಕೇಳುತ್ತಿದ್ದರು. ಅದಕ್ಕೆ ಆಕೆ ಆಲ್ಬಂನಿಂದ ತಾಯಿಯ ೆಟೋ ತೆಗೆದುಕೊಂಡು ಹೋಗಿ ಎಲ್ಲರಿಗೂ ತೋರಿಸಿದ್ದಳು. ಇದರಿಂದ ನನಗೆ ತೀವ್ರ ನೋವಾಗಿತ್ತು ಎಂದು ಹೇಳಿಕೊಂಡಿದ್ದಾನೆ.

ಎಸ್ಪಿ ಡಾ. ವಿಕ್ರಮ್ ಅಮಟೆ, ಹೆಚ್ಚುವರಿ ಎಸ್ಪಿ ಜಗದೀಶ್, ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್, ಎನ್.ಆರ್.ಪುರ ಸಿಪಿಐ ಗುರು ಕಾಮತ್, ಬಾಳೆಹೊನ್ನೂರು ಪಿಎಸ್‌ಐ ರವೀಶ್ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲಿಸಿದರು. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net