

ಹಾಸನ: ಜನುಮ ಕೊಟ್ಟ ತಂದೆ ತಾಯಿಯನ್ನೇ ದುರುಳ ಮಗ ತಿಂಡಿಯಲ್ಲಿ ಕಳೆನಾಶಕ ವಿಷ ಬೆರಸಿ ಕೊಲೆ ಮಾಡಿರುವ ಘಟನೆ ಅರಕಲಗೂಡು ತಾಲೂಕಿನ ಕೊಣನೂರು ಹೋಬಳಿಯ ಅಕ್ಕಲವಾಡಿ ಗ್ರಾಮದಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಕ್ಕಲವಾಡಿ ಗ್ರಾಮದ ನಂಜುಂಡಪ್ಪ (55) ಉಮಾ (45) ಎಂಬುವರು ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ತಂದೆ ತಾಯಿಯನ್ನು ಕೊಲೆ ಮಾಡಲು ವಿಷ ನೀಡಿದ ಪಾಪಿ ಮಗನನ್ನ ಪೊಲೀಸರು ಬಂದಿದ್ದಾರೆ.
ಘಟನೆಯ ವಿವರ:
ಅಕ್ಕಲವಾಡಿ ಗ್ರಾಮದಲ್ಲಿ ನಂಜುಂಡಪ್ಪ ಮತ್ತು ಉಮಾ ದಂಪತಿಗಳಿಗೆ ಮೂವರು ಮಕ್ಕಳು ಹಿರಿಯ ಮಗಳನ್ನು ಅದೇ ಊರಿಗೆ ಕೊಟ್ಟು ಮದುವೆ ಮಾಡಲಾಗಿದೆ ಇಬ್ಬರು ಗಂಡು ಗಂಡು ಮಕ್ಕಳಿದ್ದು ಅವರಲ್ಲಿ ಮೊದಲನೆಯ ಮಂಜುನಾಥ ತಂದೆಯವರೊಂದಿಗೆ ವಾಸವಾಗಿದ್ದು ಎರಡನೇ ಮಗ ಸಕಲೇಶಪುರದ ಬಾಳುಪೇಟೆಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಮಂಜುನಾಥ ಮನೆ ಕಟ್ಟುವ ಸಂದರ್ಭದಲ್ಲಿ ತಂದೆ ತಾಯಿ ಇಬ್ಬರು ಕೈಸಾಲ ಅಲ್ಲದೆ ಸ್ವ ಸಹಾಯ ಸಂಘದಲ್ಲಿ ಸಾಲ ಮಾಡಿ ಮಗನಿಗೆ ನೀಡಿದ್ದರು. ಸ್ವಲ್ಪ ಸಮಯದ ನಂತರ ಹಣವನ್ನು ವಾಪಸ್ ನೀಡುವಂತೆ ಕೇಳುತ್ತಿದ್ದರು. ಈ ವಿಚಾರಕ್ಕಾಗಿ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಸಾಲ ಕೊಟ್ಟವರು ತಂದೆ ತಾಯಿಯನ್ನು ಹಣ ಕೊಡುವಂತೆ ಹಿಂಸೆಸುತ್ತಿದ್ದರು. ಪೋಷಕರು ಮಗನ ಮೇಲೆ ಒತ್ತಡ ಹಾಕುತಿದ್ದರು. ಇದರಿಂದ ಬೇಸತ್ತು ಮಗ ತಂದೆ ತಾಯಿಯನ್ನ ಸಾಯಿಸಿದರೆ ಯಾವ ಸಾಲವನ್ನು ತೀರಿಸುವಂತಿಲ್ಲ ಮತ್ತು ಸಂಘದವರಿಂದ ಇನ್ನು ಹೆಚ್ಚಿನ ಹಣ ಬರುತ್ತದೆ ಎಂಬ ದುರುದ್ದೇಶದಿಂದ ಕೊಲೆ ಮಾಡಲು ಸಂಚುರೂಪಿಸಿದ್ದಾನೆ.
ಆ.15ರಂದು ಬೆಳಗ್ಗೆ ತಾಯಿ ಉಮಾ ಅವರು ಪಲಾವ್ ತಿಂಡಿ ಮಾಡಿದ್ದರು ಇದಕ್ಕೆ ಪಾಪಿ ಮಗ ಮಂಜುನಾಥ ವಿಷ ಬೆರೆಸಿ ತಾನು ಕೂಡ ತಿಂಡಿ ತಿಂದು ಕೊಣನೂರಿಗೆ ಆಗಮಿಸಿದ್ದಾನೆ. ಈ ಸಂದರ್ಭದಲ್ಲಿ ಆತನಿಗೆ ವಾಂತಿಯಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆ ಆದರೆ ಮನೆಯಲ್ಲಿದ್ದ ತಂದೆ ತಾಯಿಯವರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನ ಕೊಣನೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಮಂಜುನಾಥ್ ಗುಣಮುಖರಾಗಿದ್ದು 4 ದಿನಗಳ ನಂತರ ತಂದೆ ನಂಜುಂಡಪ್ಪ ಅವರನ್ನು ಹಾಸನದ ಖಾಸಗಿ ಆಸ್ಪತ್ರೆ ತಾಯಿ ಉಮಾ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ ಆದರೆ ಗುಣಮುಖರಾಗುವುದಿಲ್ಲ ಎಂಬ ಕಾರಣಕ್ಕಾಗಿ ವೈದ್ಯರ ಸೂಚನೆ ಮೇರೆಗೆ ಆ 23 ರಂದು ಉಮಾ ಅವರನ್ನು ಬೆಂಗಳೂರಿನಿಂದ ಹಾಗೂ ತಂದೆ ನಂಜುಂಡಪ್ಪ ಅವರನ್ನು ಹಾಸನದಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ನಂತರ ಇಬ್ಬರು ಮೃತಪಟ್ಟಿದ್ದು ವೈದ್ಯರು ಆಹಾರದಲ್ಲಿ ವಿಷ ಬೆರೆಯುತ್ತಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಮೃತರ ಎರಡನೇ ಮಗ ಕೊಣನೂರು ಠಾಣೆಯಲ್ಲಿ ಜೈ ರಾಜ್ ದೂರು ಕೊಟ್ಟ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಮಂಜುನಾಥನನ್ನ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದು ಆತನನ್ನ ಬಂದಿಸಲಾಗಿದೆ.