

ಬಾಳೆಹೊನ್ನೂರು: ಕಿಚ್ಚಬ್ಬಿ ಗ್ರಾಮದಲ್ಲಿ ಮಾತುಬಿಟ್ಟಿದ್ದ ವಿವಾಹಿತೆಯನ್ನು ಆಕೆಯ ಮಕ್ಕಳ ಎದುರೇ ಪ್ರಿಯಕರ ಚಾಕುವಿನಿಂದ ಇರಿದು, ಕೆರೆಗೆ ತಳ್ಳಿ ಹತ್ಯೆ ಮಾಡಿದ್ದಾನೆ.
ಎನ್.ಆರ್.ಪುರ ತಾಲೂಕಿನ ಆಡುವಳ್ಳಿ ಗ್ರಾಮ ಪಂಚಾಯಿತಿ ಕಿಚ್ಚಬ್ಬಿ ಗ್ರಾಮದ ತೃಪ್ತಿ (25) ಹತ್ಯೆಯಾದ ವಿವಾಹಿತೆ. ಬೆಂಗಳೂರಿನ ಆನೇಕಲ್‌ನ ಚಿರಂಜೀವಿ ಕೊಲೆಮಾಡಿದ ಆರೋಪಿ.
ತೃಪ್ತಿ ಮತ್ತು ಬೆಂಗಳೂರಿನ ಚಿರಂಜೀವಿ ಮೊಬೈಲ್ ಮೂಲಕ ಪರಿಚಯವಾಗಿ ಪ್ರೀತಿಸುತ್ತಿದ್ದರು. ನವೆಂಬರ್‌ನಲ್ಲಿ ತೃಪ್ತಿಯು ಪತಿ, ಮಕ್ಕಳಿಂದ ಬೇರ್ಪಟ್ಟು ಪ್ರಿಯಕರ ಚಿರಂಜೀವಿ ಜತೆ ನಾಪತ್ತೆಯಾಗಿದ್ದಳು. ಪತ್ನಿ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಗಂಡ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ತೃಪ್ತಿ ಮತ್ತು ಚಿರಂಜೀವಿಯನ್ನು ಪತ್ತೆ ಹಚ್ಚಿದ ಪೊಲೀಸರು ಕಿಚ್ಚಬ್ಬಿ ಗ್ರಾಮಕ್ಕೆ ಕರೆತಂದು ಸಂಧಾನ ನಡೆಸಿ ಪ್ರಿಯಕರನೊಂದಿಗೆ ತೆರಳದಂತೆ ಸೂಚಿಸಿ ಆಕೆಯ ಪತಿಯೊಂದಿಗೆ ಕಳುಹಿಸಿದ್ದರು. ಬಳಿಕ ತೃಪ್ತಿ ಚಿರಂಜೀವಿ ಜತೆ ಮಾತು ಬಿಟ್ಟಿದ್ದಳು. ಇದರಿಂದ ಚಿರಂಜೀವಿ ಕೋಪಗೊಂಡಿದ್ದು, ಶನಿವಾರ ಆಕೆಯ ಗಂಡ ಮನೆಯಲ್ಲಿ ಇಲ್ಲದ ವೇಳೆ ಆಗಮಿಸಿ ಆಕೆಯ ಮಕ್ಕಳ ಎದುರೇ ಚಾಕುವಿನಿಂದ ಇರಿದು ಮನೆ ಸಮೀಪ ಕೆರೆಗೆ ತಳ್ಳಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ತೃಪ್ತಿಗೆ ನಾಲ್ಕು ವರ್ಷದ ಹಾಗೂ ಎರಡು ವರ್ಷದ ಇಬ್ಬರು ಮಕ್ಕಳಿದ್ದಾರೆ. ತಾಯಿಯನ್ನು ಕಣ್ಣೆದುರೇ ಕೊಲೆ ಮಾಡಿರುವುದನ್ನು ಕಂಡು ಮಕ್ಕಳು ಭಯಗೊಂಡಿದ್ದಾರೆ. ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್, ಎನ್.ಆರ್.ಪುರ ಸಿಪಿಐ ಗುರು ಕಾಮತ್, ಪಿಎಸ್‌ಐ ರವೀಶ್ ಸ್ಥಳ ಪರಿಶೀಲಿಸಿದ್ದಾರೆ.