ಮಕ್ಕಳೆದುರು ಬೇಡ ಕೆಟ್ಟ ವಿಚಾರ

KaSaPa
Published on

ಕಲಬುರಗಿ: ಜೀವನದಲ್ಲಿ ಬಂದು ಹೋಗುವ ಸಿಹಿ-ಕಹಿ ಘಟನೆ ಮೀರಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಬೇಕು. ಕುಟುಂಬದಲ್ಲಿ ಸಾಮರಸ್ಯ ಮುಖ್ಯ. ಮಗುವಿಗೆ ಪೂರಕವಾದ ನಡೆ-ನುಡಿ ವಿಚಾರಗಳ ಮೂಲಕ ಪ್ರೋತ್ಸಾಹಿಸಬೇಕಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಸ್.ನಾಗಶ್ರೀ ಹೇಳಿದರು.

ವಿಜಯಕುಮಾರ ತೇಗಲತಿಪ್ಪಿ ತಮ್ಮ ಪುತ್ರಿ ಸಮೃದ್ಧಿಯ ೮ನೇ ವರ್ಷದ ಸ್ಮರಣೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಮೃದ್ಧಿ ಫೌಂಡೇಷನ್ ಸಹಯೋಗದಡಿ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಮಕ್ಕಳ ಸಾಹಿತ್ಯೋತ್ಸವ ಎಂಬ ಮಕ್ಕಳ ವಿವೇಕಕ್ಕೆ ಬೆಳಕು ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಮುಂದೆ ನಾವ್ಯಾರೂ ಸುಳ್ಳು ಹೇಳಬಾರದು. ಮಾಡಿದ್ದು-ನೋಡಿದ್ದನ್ನು ಕಲಿಯುತ್ತಾರೆ. ಹೀಗಾಗಿ ಪಾಲಕರು ಕೆಟ್ಟ ವಿಚಾರಗಳನ್ನು ಮಕ್ಕಳ ಮುಂದೆ ಪ್ರಸ್ತಾಪಿಸಬಾರದು ಎಂದು ಕಿವಿಮಾತು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ೧೨ನೇ ಶತಮಾನದ ಬಸವಾದಿ ಶರಣರ ವಚನ ಕಂಠಪಾಠ ಜತೆಗೆ ಅದರಲ್ಲಿನ ಸಾರ ಅರ್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು. ನಾವಾಡುವ ಮಾತುಗಳು ವರದಾನವಿದ್ದಂತೆ. ಹಿತ-ಮಿತವಾಗಿ ಬಳಸುವ ಭಾಷೆ ಅನುಕರಣೀಯವಾಗಿರಬೇಕು. ಸಮೃದ್ಧಿ ಹೆಸರಲ್ಲಿ ಮಕ್ಕಳಿಗೆ ಪ್ರೋತ್ಸಾಹಿಸುವ ಪರಂಪರೆ ಏಳೆಂಟು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಸಹಕಾರಿ ಧುರೀಣ ಚನ್ನಮಲ್ಲಯ್ಯ ಹಿರೇಮಠ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಸಂಶೋಧಕ ಮುಡಬಿ ಗುಂಡೇರಾವ್ ಮಾತನಾಡಿದರು.

ಪ್ರಮುಖರಾದ ಯಶ್ವಂತರಾಯ ಅಷ್ಟಗಿ, ಧರ್ಮಣ್ಣ ಧನ್ನಿ, ಸಿದ್ಧಲಿಂಗ ಬಾಳಿ, ರವೀಂದ್ರಕುಮಾರ ಭಂಟನಳ್ಳಿ, ಬಾಬುರಾವ ಪಾಟೀಲ್, ಶಕುಂತಲಾ ಪಾಟೀಲ್ ಜಾವಳಿ, ರಾಜೇಂದ್ರ ಮಾಡಬೂಳ, ಬಿ.ಎಂ. ಪಾಟೀಲ್ ಕಲ್ಲೂರ, ಎಚ್.ಎಸ್. ಬರಗಾಲಿ, ವಿನೋದಕುಮಾರ ಜನೇವರಿ, ಡಾ.ಕೆ.ಗಿರಿಮಲ್ಲ, ವಿಶ್ವನಾಥ ತೊಟ್ನಳ್ಳಿ, ಸೋಮಶೇಖರಯ್ಯ ಹೊಸಮಠ, ನಾಗನಾಥ ಯಳಸಂಗಿ, ಡಾ.ರೆಹಮಾನ್ ಪಟೇಲ್, ಎಸ್.ಕೆ. ಬಿರಾದಾರ್, ನಾಗಪ್ಪ ಸಜ್ಜನ್, ಸುರೇಶ ಲೇಂಗಟಿ, ಸಂತೋಷ ಕುಡಳ್ಳಿ, ಗುರುಬಸಪ್ಪ ಸಜ್ಜನಶೆಟ್ಟಿ ಭಾಗವಹಿಸಿದ್ದರು.

ಶರಣಸಬವೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ಶಿವರಾಜ ಶಾಸ್ತಿ ಹೇರೂರ ಅವರಿಗೆ ವರ್ಷದ ವ್ಯಕ್ತಿ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಯಿತು. ವಿಶಿಷ್ಟ ಪ್ರತಿಭೆಯಿಂದ ಗಮನ ಸೆಳೆದ ಮಕ್ಕಳಾದ ಸಂಜನಾ ಶಿವಶರಣಪ್ಪ, ಪ್ರೀತಮ್ ಗುಡ್ಡೊಡಗಿ, ಆವಂತಿಕಾ ಕಲಶೆಟ್ಟಿ, ಹರ್ಷಲ್ ಅಡತಿ, ಮಹೇಶ್ವರಿ ಷಣ್ಮುಖರೂಢ ಅವರಿಗೆ ಕಲೆ ಸಮೃದ್ಧಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.

ಮಕ್ಕಳು ತಮ್ಮಲ್ಲಿನ ಪ್ರತಿಭೆ ಅನಾವರಣಗೊಳಿಸಲು ವೇದಿಕೆ ಒದಗಿಸಿದ ಸಾಹಿತ್ಯೋತ್ಸವ ಕಾರ್ಯಕ್ರಮ ಅಕ್ಷರಶಃ ಪ್ರತಿಭಾ ಸಂಭ್ರಮದಂತೆ ಕಂಡುಬಂದಿತು. ಭಾಗವಹಿಸಿದ್ದ ಮಕ್ಕಳ ಕನ್ನಡ, ಜಾನಪದ ಗೀತೆ, ಭರತನಾಟ್ಯ ನೃತ್ಯ, ಏಕಪಾತ್ರಾಭಿನಯ, ಸಮೂಹ ನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net