ಮಕ್ಕಳು ಹೆಚ್ಚು ಮೊಬೈಲ್ ಬಳಸದಂತೆ ನೋಡಿಕೊಳ್ಳಿ:ಶಾಸಕ ಸ್ವರೂಪ್ ಕಿವಿಮಾತು

ಮಕ್ಕಳು ಹೆಚ್ಚು ಮೊಬೈಲ್ ಬಳಸದಂತೆ ನೋಡಿಕೊಳ್ಳಿ:ಶಾಸಕ ಸ್ವರೂಪ್ ಕಿವಿಮಾತು
Published on

ಹಾಸನ: ಮಕ್ಕಳು ಹೆಚ್ಚು ಮೊಬೈಲ್ ಬಳಸದಂತೆ ಚಿಕ್ಕ ವಯಸ್ಸಿನಿಂದಲೇ ಒಳ್ಳೆಯ ಸಂಸ್ಕೃತಿ ನೀಡುವ ಮೂಲಕ ಅವರ ಮುಂದಿನ ಭವಿಷ್ಯ ಉಜ್ವಲವಾಗಿ ಮಾಡುವ ಜವಬ್ದಾರಿ ಪೋಷಕರ ಮೇಲಿದೆ ಎಂದು ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಹೇಳಿದರು.
ನಗರದ ಶ್ರೀ ಸಂಗಮೇಶ್ವರ ಬಡಾವಣೆ ಶ್ರೀ ಜವೇನಹಳ್ಳಿ ಕೆರೆ ಬಳಿ ಇರುವ ಹಿರಿಯ ನಾಗರಿಕರ ಸಭಾಂಗಣದಲ್ಲಿ ಮೈ ಲಿಟ್ಲು ವರ್ಲ್ಡ್ ಫ್ರೀ ಶಾಲೆಯ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಅಪ್ಪಂದಿರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೈಯಕ್ತಿಕವಾಗಿ ನಾನು ಕೂಡ ನನ್ನ ಮಗನ ಜತೆ ಹೆಚ್ಚು ಕಾಲ ಕಳೆಯಲು ಇಷ್ಟಪಟ್ಟರೂ ಕೂಡ ಆಗುತ್ತಿಲ್ಲ. ಅಪ್ಪ ಆದವರು ಮಕ್ಕಳ ಜತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಬೇಕು. ಇಲ್ಲವಾದರೆ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಚಿಕ್ಕ ವಯಸ್ಸಿನಿಂದಲೇ ಉತ್ತಮ ಸಂಸ್ಕೃತಿ ಹೇಳಿ ಕೊಡುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಶಾಲೆಯಿಂದ ಮಕ್ಕಳು ಮನೆಗೆ ಬರುತ್ತಿದ್ದಂತೆ ಮೊಬೈಲ್ ನೋಡುವ ಚಟವನ್ನು ಮೈಗೂಡಿಸಿಕೊಂಡಿದ್ದಾರೆ. ಇದರಿಂದ ಮಕ್ಕಳ ಆರೋಗ್ಯ ಸೇರಿದಂತೆ ಶಿಕ್ಷಣದ ಮೇಲೆ ಅಪಾಯ ಬೀರಲಿದೆ. ಹಿಂದಿನ ಕಾಲದಲ್ಲಿ ಮಕ್ಕಳು ಮನೆಗೆ ಬಂದ ಕೂಡಲೇ ಖಾಲಿ ಜಾಗ ಇಲ್ಲವೇ ಪಾರ್ಕ್‌ಗಳಲ್ಲಿ ಆಟವಾಡುತ್ತಿದ್ದರು. ಈಗ ಪಾರ್ಕ್ ಜಾಗವನ್ನೆಲ್ಲಾ ಮುಚ್ಚಿ ಲೇಔಟ್‌ಗಳನ್ನಾಗಿ ಮಾಡಲಾಗಿದೆ. ಮಕ್ಕಳ ಶಾಲೆಯಿಂದ ಬಂದ ತಕ್ಷಣ ಯಾವುದಾದರೂ ಒಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಹಾಸನದಲ್ಲಿರುವ ಪಾರ್ಕ್‌ಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಪ್ರತಿ ವಾರ್ಡ್‌ನಲ್ಲೂ ಪಾರ್ಕ್ ಅಭಿವೃದ್ಧಿ ಮಾಡಲಾಗುತ್ತಿದೆ. ಕಸ ವಿಲೇವಾರಿ ಬಗ್ಗೆ ಹೆಚ್ಚಿನ ಗಮನ ನೀಡಿ ನಗರಸಭೆಯಿಂದ ಬರುವ ವಾಹನಕ್ಕೆ ಕಸವನ್ನು ಹಾಕಬೇಕು. ಎಲ್ಲೆಂದರಲ್ಲಿ ಕಸವನ್ನು ಹಾಕಬಾರದು. ಇನ್ನು ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ ಹಾಸನದ ಸ್ವಚ್ಛತೆ ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.
ಶಾಲೆಯ ಮುಖ್ಯಸ್ಥರು ಹಾಗೂ ನಗರಸಭೆ ಸದಸ್ಯೆ ಅಶ್ವಿನಿ ಮಹೇಶ್ ಮಾತನಾಡಿ, ತಂದೆ ಎಂದರೇ ಮಕ್ಕಳ ಪ್ರತಿ ನೋವು, ನಲಿವುಗಳನ್ನು ಗಮನಿಸಬೇಕು. ತಾನು ಉಪವಾಸ ಇದ್ದರೂ ಮಗುವನ್ನು ಉಪವಾಸ ಇರಲು ಬಿಡುವುದಿಲ್ಲ. ಮಕ್ಕಳಿಗೆ ಯಾರೇ ಕೇಳಿದರೂ ಅಪ್ಪನೇ ಅವರ ಮೊದಲ ಹಿರೋ ಎಂದು ಹೇಳುತ್ತಾರೆ ಎಂದು ಹೇಳಿಎಲ್ಲಾ ಅಪ್ಪಂದಿರಿಗೂ ಶುಭಾಶಯಗಳನ್ನು ತಿಳಿಸಿದರು.
ಮುಂದಿನ ದಿನಗಳಲ್ಲಿ ಪ್ರತಿ ವಾರ್ಡ್‌ನಲ್ಲಿರುವ ಪಾರ್ಕ್ ಅಭಿವೃದ್ಧಿ ಮಾಡಲಾಗುವುದು. ಇನ್ನು ಕಸವನ್ನು ಎಲ್ಲೆಂದರಲ್ಲಿ ಹಾಕದೇ ಕಸ ವಿಲೇವಾರಿ ಮಾಡುವ ಅಫೆ ವಾಹನಕ್ಕೆ ಹಾಕುವಂತೆ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್ ಅವರು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಮಾಜಿ ಸದಸ್ಯ ಮಹೇಶ್, ಶಿಕ್ಷಕಿ ರಾಧಾ ವೆಂಕಟೇಶ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net