

ಕೊಳ್ಳೇಗಾಲ: ನಗರಸಭೆ ವ್ಯಾಪ್ತಿಯ 23ನೇ ವಾರ್ಡ್‌ನಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಐವರಿಗೆ ವಾಂತಿ, ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿ ಪಟ್ಟಣದ ವಿವಿಧ ಆಸ್ಪತ್ರೆಗಳಿಗೆ ಬುಧವಾರ ದಾಖಲಾಗಿದ್ದಾರೆ.
ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಮಕ್ಕಳಾದ ಆಯನ್ ಶರೀಫ್, ಐಯಿಷಾ ಹಾಗೂ ರಿಜ್ವಾನ್ ಖಾನ್, ಖಾಸಗಿ ಆಸ್ಪತ್ರೆಯಲ್ಲಿ ಸಿಮ್ರಾನ್ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಬ್ರೀನ್ ಎಂಬುವವರು ಚಿಕಿತ್ಸೆ ಪಡೆದು ಹಿಂದಿರುಗಿದ್ದಾರೆ.
ಹೆಚ್ಚಿನ ಚಿಕಿತ್ಸೆಗಾಗಿ ಬಾಲಕ ಆಯನ್ ಶರೀಫ್, ಬಾಲಕಿ ಐಯಿಷಾರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲುಷಿತ ನೀರು ಸೇವಿಸಿರುವುದರಿಂದ ವಾಂತಿ, ಭೇದಿ ಕಾಣಿಸಿಕೊಂಡಿರಬಹುದೆಂದು ಶಂಕಿಸಲಾಗಿದೆ.
ವಾರ್ಡ್‌ಗೆ ನಗರಸಭೆ ಅಧ್ಯಕ್ಷರ ಭೇಟಿ:
ವಿಷಯ ತಿಳಿದ ಕೂಡಲೇ ನಗರಸಭೆ ಅಧ್ಯಕ್ಷೆ ರೇಖಾ ರಮೇಶ್, ಸದಸ್ಯ ರಾಘವೇಂದ್ರ, ಧರಣೇಶ್ ವಾರ್ಡ್‌ಗೆ ಭೇಟಿ ನೀಡಿದರು. ರೇಖಾ ರಮೇಶ್ ಮಾತನಾಡಿ, ವಾಂತಿ, ಭೇದಿ ಕಾಣಿಸಿಕೊಂಡು ಐವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ವ್ಯೆದ್ಯರು ಚಿಕಿತ್ಸೆ ನೀಡಿದ್ದಾರೆ. ವಾಂತಿ, ಭೇದಿ ಕಾಣಿಸಿಕೊಂಡಿರುವುದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕೆಲವು ಸ್ಯಾಂಪಲ್‌ಗಳನ್ನು ಲ್ಯಾಬ್‌ಗಳಿಗೆ ಕಳುಹಿಸಿಕೊಟ್ಟಿದ್ದಾರೆ ಎಂದರು.
ವಾರ್ಡ್‌ನಲ್ಲಿ ಕುಡಿಯಲು 24*7 ಕುಡಿಯುವ ನೀರಿನ ಯೋಜನೆಯ ನೀರು ಪೂರೈಸುತ್ತಿದ್ದೇವೆ. ಆದರೆ, ನಿವಾಸಿಗಳು ಹಳೆಯ ನಲ್ಲಿಗಳಲ್ಲಿ ಬರುವ ಬೋರ್‌ವೆಲ್ ನೀರು ಕುಡಿಯುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. 2 ನೀರನ್ನು ಲ್ಯಾಬ್‌ಗೆ ಕಳುಹಿಸಿ ಕೊಡಲಾಗಿದೆ. ವರದಿ ಬಂದ ಬಳಿಕವೇ ಇದಕ್ಕೆ ಕಾರಣ ಏನು ಎಂದು ಗೊತ್ತಾಗುತ್ತದೆ ಎಂದರು.
ವಾಂತಿ, ಭೇದಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಟಿಎಚ್‌ಒ ಡಾ.ಗೋಪಾಲ್, ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿದ್ದಾರೆ. ಬೇರೆ ಯಾರೆಲ್ಲರಿಗೆ ವಾಂತಿ, ಭೇದಿ ಸಮಸ್ಯೆ ಇದೆ ಎಂಬುದರ ಬಗ್ಗೆ ಪರಿಶೀಲಿಸಿದ್ದಾರೆ. ಮನೆಯ ಸದಸ್ಯರ ಆರೋಗ್ಯ ವಿಚಾರಿಸಿ, ನೀರನ್ನು ಕಾಯಿಸಿ ಕುಡಿಯುವಂತೆ ಸಲಹೆ ನೀಡುತ್ತಿದ್ದಾರೆ.
23ನೇ ವಾರ್ಡ್‌ನ ನಗರಸಭೆ ಸದಸ್ಯೆ ಜಯಮೇರಿ ಮಾತನಾಡಿ, ಎರಡು ವರ್ಷದ ಹಿಂದೆಯೂ ನೀರಿನ ಸಮಸ್ಯೆಯಿಂದ ವಾಂತಿ, ಭೇದಿಗೆ ನಿವಾಸಿಗಳು ತುತ್ತಾಗಿದ್ದರು. ಇದೀಗ ಮತ್ತೆ ಮರುಕಳುಹಿಸಿದೆ. ನೀರಿನ ತಪಾಸಣೆ ಬಳಿಕವೇ ಇದಕ್ಕೆ ಕಾರಣ ತಿಳಿಯಲಿದೆ. ಕೆಲ ದಿನಗಳಿಂದ 23ನೇ ವಾರ್ಡ್ ವ್ಯಾಪ್ತಿಯ ರಾಮಸ್ವಾಮಿ ಲೇಔಟ್‌ನ ಕೆಲವು ಮನೆಗಳಿಗೆ ಬೆಳಗಿನ ಜಾವ 15 ನಿಮಿಷಕಾಲ ಕಲುಷಿತ ನೀರು ಬರುತ್ತಿದೆ ಎಂದು ದೂರಿದರು.