

ಸಂಕೇಶ್ವರ: ಪಾಲಕರು, ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸಿ, ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಕೊಡಗು ವಿಶ್ವವಿದ್ಯಾಲಯ ಕುಲಪತಿ ಡಾ.ಎ.ಎಸ್.ಆಲೂರ ಹೇಳಿದರು.
ಸಮೀಪದ ನಿಡಸೋಸಿ ಹಿರಾಶುಗರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭದಲ್ಲಿ ಮಾತನಾಡಿ, ಮಕ್ಕಳಿಗೆ ಬದುಕಿನ ಸವಾಲು ಎದುರಿಸುವ ಶಕ್ತಿ ತುಂಬಿ ಕಷ್ಟ-ಸುಖಗಳ ಪರಿಚಯಿಸಿ ಸದೃಢರನ್ನಾಗಿಸಬೇಕು ಎಂದರು. ನಿಡಸೋಸಿ ಶ್ರೀಮಠ ಧಾರ್ಮಿಕತೆ ಜತೆಗೆ ಗ್ರಾಮೀಣ ಶಿಕ್ಷಣದಲ್ಲಿ ಗುಣಾತ್ಮಕತೆ ತರುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದೆ ಎಂದು ಶ್ಲಾಘಿಸಿದರು.
ಪ್ರಾಚಾರ್ಯ ಡಾ.ಎಸ್.ಸಿ.ಕಮತೆ ಮಾತನಾಡಿ, ನಾವು ಈವರೆಗೆ ೫,೦೦೦ ಪದವೀಧರರನ್ನು ನೀಡಿದ್ದೇವೆ. ಸಂಸ್ಥೆ ಈ ವರ್ಷ ನ್ಯಾಕ್‌ನಲ್ಲಿ ಎ ಪ್ಲಸ್ ಗ್ರೇಡ್ ಪಡೆದಿದೆ ಎಂದರು. ಗ್ರಾಮೀಣ ಭಾಗದಲ್ಲಿ ತಾಂತ್ರಿಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಅರಳಿದ ಈ ಸಂಸ್ಥೆಯು ಶ್ರೀಗಳ ಪರಿಕಲ್ಪನೆಯಲ್ಲಿ ಪ್ರಾರಂಭವಾದ ಸಂಶೋಧನಾ ಕೇಂದ್ರಗಳು, ಅತ್ಯುನ್ನತ ಬೋಧಕ ವೃಂದ ಮತ್ತು ಕೋಟ್ಯಾಂತರ ರೂಪಾಯಿಗಳ ಸಂಶೋಧನಾ ಧನಸಹಾಯವನ್ನು ಪಡೆಯುವ ಮೂಲಕ ಗುಣಾತ್ಮಕ ಶಿಕ್ಷಣ ನೀಡುತ್ತಿದೆ ಎಂದರು.
ಕೆ.ಜಿ.ಗುರವ, ಟ್ರಸ್ಟ್ ಉಪಾಧ್ಯಕ್ಷ ಜಿ.ಎಂ.ಪಾಟೀಲ, ಡಾ.ಬಿ.ವಿ.ಮದಿಗೊಂಡ, ಜನರಲ್ ಸೆಕ್ರೆಟರಿ ವೈಷ್ಣವಿ ಘಾಟಗೆ, ಸಚಿನ ಹುಚ್ಚನ್ನವರ ಇತರರಿದ್ದರು.
ಬದುಕಿನಲ್ಲಿ ಸಾಧಕರ ಸಹವಾಸದಿಂದ ಧನಾತ್ಮಕ ಚಿಂತನೆಗಳು ವೃದ್ಧಿಯಾಗುತ್ತವೆ. ಹೀಗಾಗಿ ಗುರಿ ತಲುಪುವ ಪ್ರತಿಯೊಬ್ಬರು ಸಹ ತಮ್ಮ ಜೀವನದಲ್ಲಿ ಉತ್ತಮರೊಂದಿಗೆ ಸ್ನೇಹ ಹೊಂದುವದು ಅತ್ಯವಶ್ಯವಾಗಿದೆ. | ಡಾ.ಎ.ಎಸ್.ಆಲೂರ ಕುಲಪತಿ, ಕೊಡಗು ವಿಶ್ವವಿದ್ಯಾಲಯ