

ಹಾಸನ: ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಈ ಸಮಾಜದ್ದಾಗಿದೆ. ಇದರಿಂದ ಮಕ್ಕಳು ಬಾಲ ಕಾರ್ಮಿಕರಾಗುವುದನ್ನ ತಪ್ಪಿಸಬಹುದಾಗಿದೆ ಎಂದು ಹಾಸನದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಟಿ.ಎನ್. ಇನವಳ್ಳಿ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ನಡೆದ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ಉತ್ತಮರನ್ನಾಗಿ ರೂಪಿಸುವಲ್ಲಿ ತಂದೆ-ತಾಯಿ, ಶಿಕ್ಷಕರ ಪಾತ್ರ ತುಂಬಾ ಮುಖ್ಯವಾಗಿದೆ. ಈ ಪಿಡುಗನ್ನು ತೊಡೆಯಲು ಕಾಯ್ದೆ- ಕಾನೂನುಗಳ ಬಗ್ಗೆ ಅರಿವು ಶಿಕ್ಷಕರಿಗೆ ಬೇಕಿದೆ. ಇದರಿಂದ ಸಮಾಜವು ಉತ್ತಮ ಮಾರ್ಗದೆಡೆ ಸಾಗಲು ಸಾಧ್ಯವಾಗುತ್ತದೆ ಎಂದರು.
ಎಲ್ಲಾ ಇಲಾಖೆಗಳು ಬದ್ಧತೆಯಿಂದ ಕೆಲಸ ಮಾಡುವ ಮೂಲಕ ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು. ಬಾಲಕಾರ್ಮಿಕರಾಗಲು ಹಲವಾರು ಕಾರಣಗಳಿವೆ. ಆದರೆ ಅವರನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ಇಡೀ ಸಮಾಜದಲ್ಲಿ ಎಲ್ಲರ ಹೊಣೆಗಾರಿಕೆಯಾಗಿದೆ. ಇದನ್ನು ಎಲ್ಲರು ಸಮರ್ಥವಾಗಿ ನಿಭಾಯಿಸಿದಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಬುಡಸಮೇತ ಕಿತ್ತೊಗೆಯಲು ಸಾಧ್ಯವಿದೆ ಎಂದು ತಿಳಿಸಿದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆ.ಎಂ. ಪುಟ್ಟಸ್ವಾಮಿ ಅವರು ಬಾಲಕಾರ್ಮಿಕ ಪದ್ಧತಿನಿರ್ಮೂಲನೆಯ ಪ್ರತಿಜ್ಞಾ ವಿಧಿ ಬೋಧನೆ ಮಾಡಿದರು.
ಹಾಸನದ ವಕೀಲರ ಸಂಘದ ಅಧ್ಯಕ್ಷರಾದ ಡಿ.ಟಿ. ಪ್ರಸನ್ನ ಮಾತನಾಡಿ, 1956 ರಲ್ಲಿಯೇ ಬಾಲಕಾರ್ಮಿಕ ನಿಷೇಧ ಕಾಯ್ದೆ ಜಾರಿಯಾಗಿದ್ದರೂ ಸಹ ಈ ಪಿಡುಗು ಇನ್ನು ಜೀವಂತವಾಗಿದೆ. ಎಲ್ಲರ ಸಹಯೋಗ, ಸಹಕಾರ, ಸಮನ್ವಯತೆ ವಹಿಸಿದ್ದಲ್ಲಿ ಮಾತ್ರವೇ ಈ ಸಮಸ್ಯೆಯನ್ನು ನೀಗಿಸಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದ ಅಪರ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರು ಮಾತನಾಡಿ, ಬಾಲಕಾರ್ಮಿಕ ಪದ್ಧತಿಯ ಬಗ್ಗೆ ಅತೀವವಾದ ಅರಿವು ಅಗತ್ಯವಿದ್ದು ಸಮಾಜದ ಎಲ್ಲ ವರ್ಗದ ಎಲ್ಲಾ ಹಂತದ ಜನರಿಗೆ ತಮ್ಮ ಜವಾಬ್ದಾರಿಯ ಬಗ್ಗೆ ತಿಳಿಸುವ ಮೂಲಕ ಈ ಪಿಡುಗನ್ನು ಇನ್ನಿಲ್ಲವಾಗಿಸಬೇಕಿದೆ ಎಂದು ಹೇಳಿದರು.
ಹಿರಿಯ ವಕೀಲರಾದ ಬಿ.ಚಂದ್ರಶೇಖರ್ ಅವರು ಬಾಲಕಾರ್ಮಿಕ ಪದ್ಧತಿ ನಿಷೇಧದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು.