ಮಕ್ಕಳು, ಮೈದುನನ್ನೂ ಕೊಲ್ಲುವ ಬೆದರಿಕೆ

5 8 SBD 1A
ಇತ್ತೀಚೆಗೆ ಹತ್ಯೆಯಾದ ಗಿರೀಶ ಕಂಬಾನೂರ ಅವರ ಶಹಾಬಾದ್​ನಲ್ಲಿರುವ ಮನೆಗೆ ಶಾಸಕ ಪ್ರಿಯಾಂಕ್ ಖರ್ಗೆ ಶುಕ್ರವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಶಿವಾನಂದ ಪಾಟೀಲ್, ಡಾ.ಎಂ.ಎ.ರಶೀದ್ ಇತರರಿದ್ದರು.
Published on

ಶಹಾಬಾದ್: ಇತ್ತೀಚೆಗೆ ಕೊಲೆಗೀಡಾಗಿದ್ದ ಕಾಂಗ್ರೆಸ್ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ ಮನೆಗೆ ಶಾಸಕ ಪ್ರಿಯಾಂಕ್ ಖರ್ಗೆ ಶುಕ್ರವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಮನೆಯ ಆಧಾರಸ್ತಂಭ ಕಳೆದುಕೊಂಡು ತೀವ್ರ ದುಃಖದಲ್ಲಿದ್ದೇವೆ. ಹೀಗಿರುವಾಗ ಕೆಲವರು ಕರೆ ಮಾಡಿ ನಮ್ಮ ಮಕ್ಕಳು ಹಾಗೂ ಮೈದುನನ್ನು ಸಹ ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದಾರೆ. ಈಗಾಗಲೇ ಇಬ್ಬರನ್ನು ಕಳೆದುಕೊಂಡಿದ್ದು, ಮತ್ತೆ ಬೆದರಿಕೆ ಕರೆಗಳು ಬರುತ್ತಿವೆ. ಇದರಿಂದ ಯಾರನ್ನೂ ಹೊರಗೆ ಬಿಡುತ್ತಿಲ್ಲ. ಯಾವಾಗ ಏನಾಗುತ್ತದೋ ಎಂಬ ಭಯದಲ್ಲಿದ್ದೇವೆ. ಕೊಲೆಗೈದವರಿಗೆ ಕಠಿಣ ಶಿಕ್ಷೆ ಕೊಡಿಸುವಂತೆ ಮೃತರ ಪತ್ನಿಯೂ ಆದ ನಗರಸಭೆ ಅಧ್ಯಕ್ಷೆ ಅಂಜಲಿ ಕಂಬಾನೂರ ಕಣ್ಣೀರು ಹಾಕಿದರು.

ಗಿರೀಶ್ ಕಾಂಗ್ರೆಸ್ಸ್​ಗಾಗಿ ಸಾಕಷ್ಟು ದುಡಿದಿದ್ದಾನೆ. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಆದರೆ ಆತನ ಕೊಲೆಯಾದಾಗ ಯಾವೊಬ್ಬ ಕಾಂಗ್ರೆಸ್ ನಾಯಕ ಬರಲಿಲ್ಲ. ಕನಿಷ್ಠ ಶವವನ್ನು ಎತ್ತಲು ಸಹ ಒಬ್ಬರು ಬರಲಿಲ್ಲ ಎಂದು ತಾಯಿ ಅಳಲು ತೋಡಿಕೊಂಡಳು.

ಕೊಲೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ ಸಮಗ್ರ ಮಾಹಿತಿ ಪಡೆದಿದ್ದು, ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ. ಕೊಲೆಗಾರರಿಗೆ ತಕ್ಕ ಶಿಕ್ಷೆಯಾಗಲಿದೆ. ನಿಮ್ಮೊಂದಿಗೆ ನಾವಿದ್ದೇವೆ. ಭಯಪಡಬೇಡಿ ಎಂದು ಶಾಸಕ ಖರ್ಗೆ ಧೈರ್ಯ ತುಂಬಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ಎಂ.ಎ. ರಶೀದ್, ಜಿಪಂ ಮಾಜಿ ಸದಸ್ಯ ಶಿವಾನಂದ ಪಾಟೀಲ್, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದುಗೌಡ ಅಫಜಲಪುರಕರ್, ಡಾ.ಅಹ್ಮದ್ ಪಟೇಲ್, ಕುಮಾರ ಚವ್ಹಾಣ್, ಪೀರ್ಪಾಶಾ, ನಾಗೇಂದ್ರ ನಾಟಿಕಾರ, ರಾಜೇಶ ಯನಗುಂಟಿಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net