ಮಕ್ಕಳು ಪಾಲಕರ ಸೂಚನೆ ಪಾಲಿಸಲಿ

22Kush01
Published on

ಕೊಡಗು: ಪಾಲಕರು ಹಾಗೂ ಶಿಕ್ಷಕರ ಸಲಹೆ ಮತ್ತು ಸೂಚನೆಯನ್ನು ಪಾಲಿಸಿದರೆ ಮಕ್ಕಳು ಸಾಮಾಜಿಕ ದೌರ್ಜನ್ಯಗಳಿಂದ ತಪ್ಪಿಸಿಕೊಳ್ಳಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಬಿ.ಪ್ರಸಾದ್ ಅಭಿಪ್ರಾಯಪಟ್ಟರು.

ಕುಶಾಲನಗರ ಸಮೀಪದ ಕೂಡಿಗೆ ಮುರಾರ್ಜಿ ದೇಸಾಯಿ ವಸತಿ ಶಾಲಾ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ವನಮಹೋತ್ಸವ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನೆ, ಶಾಲೆ ಮತ್ತಿತರ ಕಡೆಗಳಲ್ಲಿ ಮಕ್ಕಳ ಮೇಲೆ ಉಂಟಾಗುವ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನುಗಳಿವೆ. ಅಲ್ಲದೆ ಲೈಂಗಿಕ ದೌರ್ಜನ್ಯಕ್ಕೊಳಗಾಗುವ ಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಮಕ್ಕಳ ವಿಶೇಷ ರಕ್ಷಣಾ ಘಟಕ ಎಲ್ಲೆಡೆ ಕಾರ್ಯಾಚರಣೆ ಮಾಡುತ್ತಿದೆ. ಈ ಸಂಬಂಧ ಕಾನೂನು ಪ್ರಾಧಿಕಾರ ವತಿಯಿಂದ ಶಾಲೆಗಳಲ್ಲಿ ಮಾಹಿತಿ ನೀಡುವ ಕೆಲಸ ಆಗುತ್ತಿದೆ ಎಂದರು.

ಮಕ್ಕಳ ವಿಶೇಷ ಪೊಲೀಸ್ ರಕ್ಷಣಾ ಘಟಕದ ಪ್ರಮುಖರಾದ ಸುಮತಿ ಮಾತನಾಡಿ, ಮಕ್ಕಳಿಗೆ ಸುರಕ್ಷಿತ ವಾತಾವರಣದ ಅಗತ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಶೋಷಣೆ ಹೆಚ್ಚಾಗಿ ಕಂಡುಬರುತ್ತಿದ್ದು ಹೆಣ್ಣು ಮಕ್ಕಳಿಗಿಂತ ಅಧಿಕವಾಗಿ ಗಂಡು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಅಂಕಿ ಅಂಶಗಳೂ ಕಂಡು ಬರುತ್ತಿವೆ ಎಂದರು.

ವಸತಿ ಶಾಲೆಯ ಪ್ರಾಂಶುಪಾಲ ಪ್ರಕಾಶ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಕಾನೂನು ಸೇವಾ ಘಟಕದ ಉಪ ಪ್ರಧಾನ ಅಧೀಕ್ಷಕಿ ಮೈಮುನ, ಗ್ರಾಮಾಂತರ ಠಾಣೆಯ ಉಪನಿರೀಕ್ಷಕಿ ಭಾರತಿ, ಕಾವೇರಿ ನದಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಬಿ.ಎಸ್. ಜೋಯಪ್ಪ ಇದ್ದರು. ಇದಕ್ಕೂ ಮುನ್ನ ಶಾಲೆ ಆವರಣದಲ್ಲಿ ತೆಂಗು ಮತ್ತು ವಿವಿಧ ರೀತಿಯ ಹಣ್ಣಿನ ಸಸಿಗಳನ್ನು ನೆಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net