ಮಕ್ಕಳು ದೇಶದ ಭವಿಷ್ಯ ಅವರ ಸಂರಕ್ಷಣೆ ನಮ್ಮ ಮೊದಲ ಆದ್ಯತೆಯಾಗಲಿ

ಮಕ್ಕಳು ದೇಶದ ಭವಿಷ್ಯ ಅವರ ಸಂರಕ್ಷಣೆ ನಮ್ಮ ಮೊದಲ ಆದ್ಯತೆಯಾಗಲಿ
Published on

ಹಾಸನ : ನಮ್ಮ ದೇಶದಲ್ಲಿ ಮೂರನೇ ಒಂದು ಭಾಗದಷ್ಟು ಮಕ್ಕಳಿದ್ದಾರೆ. ಅಂದರೆ ಸುಮಾರು 48 ಕೋಟಿ ಮಕ್ಕಳು. ಈ ಮಕ್ಕಳು ನಮ್ಮ ದೇಶದ ಭವಿಷ್ಯ. ಅವರ ಸಂರಕ್ಷಣೆ ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಕೆ.ಜೈಕಿರಣ ಹೇಳಿದರು.

ಮಕ್ಕಳ ರಕ್ಷಣಾ ಘಟಕದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ತಡೆ, ಬಾಲ ಕಾರ್ಮಿಕ ತಡೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳ ತಡೆ ಹಾಗೂ ಭಿಕ್ಷಾಟನೆ ನಿಷೇಧ ಕುರಿತ ಕಿರುಚಿತ್ರಗಳ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಸಿಗಬೇಕಾದ ಎಲ್ಲಾ ಪ್ರೀತಿ, ವಾತ್ಸಲ್ಯ, ಶಿಕ್ಷಣ, ಆಹಾರ, ಮನೋರಂಜನೆ, ಹಕ್ಕುಗಳು ಸಿಕ್ಕರೆ ಮಕ್ಕಳು ನಮ್ಮ ದೇಶದ ಅಭಿವೃದ್ಧಿಗೆ ಪ್ರೇರಕ ಶಕ್ತಿಯಾಗಿ ಹೊರಹೊಮ್ಮುತ್ತಾರೆ. ಅನಾಥ, ನಿರ್ಲಕ್ಷೃ, ದೌರ್ಜನ್ಯ ಮತ್ತು ಶೋಷಣೆ, ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ, ಭಿಕ್ಷಾಟಣೆ, ಬಾಲ ಕಾರ್ಮಿಕ ಇನ್ನಿತರ ಸಮಸ್ಯೆಗಳಿಗೆ ಒಳಗಾದರೆ ಮಕ್ಕಳ ಬದುಕು ಅರಳುವ ಮುನ್ನವೇ ಕಮರಿ ಹೋಗುತ್ತದೆ. ಇದರಿಂದ ದೇಶದ ಅಭಿವೃದ್ಧಿ ಕುಂಠಿತವಾಗುತ್ತದೆ ಎಂದರು.

ಹಾಸನ ಜಿಲ್ಲೆಯಲ್ಲಿ ಕೊರೋನಾ ನಂತರ ಮಕ್ಕಳ ಸಮಸ್ಯೆಗಳು ತೀವ್ರ ರೀತಿಯಲ್ಲಿ ಹೆಚ್ಚಾಗುತ್ತಿವೆ. ಬಾಲ್ಯವಿವಾಹ, ಮಕ್ಕಳು ಲೈಂಗಿಕ ದೌರ್ಜನ್ಯಗಳಿಗೆ ಒಳಗಾಗುವುದು. ಹದಿಹರೆಯದ ಮಕ್ಕಳು ಆಕರ್ಷಣೆಗೆ ಒಳಗಾಗಿ ಮನೆ ಬಿಟ್ಟು ಓಡಿ ಹೋಗುವುದು ಹೆಚ್ಚಾಗಿದೆ. ಅಲ್ಲದೇ ಮಕ್ಕಳು ಮೊಬೈಲ್ ಬಳಕೆಯ ದಾಸರಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ, ಮಕ್ಕಳ ರಕ್ಷಣಾ ನಿರ್ದೇಶನಾಲಯದ ಸಹಕಾರದೊಂದಿಗೆ ಹಾಗೂ ಚಿತ್ರ ನಿರ್ದೇಶಕರಾದ ಜನಾರ್ದನ ರೆಡ್ಡಿ ಇವರ ಸಹಕಾರದೊಂದಿಗೆ ಬಾಲ್ಯವಿವಾಹ ನಿಷೇಧ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ, ಬಾಲ ಕಾರ್ಮಿಕ ನಿಷೇಧ ಹಾಗೂ ಭಿಕ್ಷಾಟಣೆ ತಡೆ ಕುರಿತು ಡಾಕ್ಯೂಮೆಂಟರಿ ಕಿರುಚಿತ್ರಗಳನ್ನು ಚಿತ್ರೀಕರಿಸಲಾಗಿದೆ. ಈ ಕಿರುಚಿತ್ರಗಳ ಮೂಲಕ ಬಾಲ್ಯವಿವಾಹಕ್ಕೆ ಕಾರಣಗಳು, ದುಷ್ಪರಿಣಾಮಗಳು, ಕಾನೂನಿನಡಿ ಇರುವ ಶಿಕ್ಷೆ ಕುರಿತು, ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕಾರಣಗಳು, ಇದರಿಂದಾಗುವ ದುಷ್ಪರಿಣಾಮಗಳು, ಪೊಕ್ಸೋ ಕಾಯ್ದೆಯಡಿ ವಿಧಿಸಲಾಗುವ ಶಿಕ್ಷೆಯ ಕುರಿತು ವಿವಿಧ ರೀತಿಯ ಲೈಂಗಿಕ ಸ್ವರೂಪದ ಅಪರಾಧಗಳು, ಆ ಅಪರಾಧಗಳಿಗೆ ಕಾನೂನಿನಡಿಯಲ್ಲಿ ಇರುವ ಶಿಕ್ಷೆಗಳ ಬಗ್ಗೆ ಪರಿಚಯಿಸಲಾಗಿದೆ ಎಂದು ಮಾಹಿತಿ ನೀಡಿದರು.

ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಉಪಪ್ರಾಂಶುಪಾಲರಾದ ಡಾ. ಶೈಲಜಾ ಮಾತನಾಡಿ, ಕಿರುಚಿತ್ರಗಳಲ್ಲಿ ಬಾಲ ಕಾರ್ಮಿಕ ಮತ್ತು ಭಿಕ್ಷಾಟನೆಗೆ ಇರುವ ಕಾರಣ, ಪರಿಣಾಮಗಳು ಹಾಗೂ ತಡೆಗಟ್ಟಲು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಎಲ್ಲಾ ಕಿರುಚಿತ್ರಗಳು ಉತ್ತಮವಾಗಿ ಮೂಡಿ ಬಂದಿವೆ. ಇದು ಜಿಲ್ಲೆ, ರಾಜ್ಯ ಹಾಗೂ ದೇಶದ ಎಲ್ಲಾ ಭಾಗಗಳಿಗೂ ತಲಪುವಂತಾಗಲಿ. ಆ ಮೂಲಕ ಮಕ್ಕಳು ಜಾಗೃತರಾಗಲಿ ಎಂದು ಆರೈಸಿದರು.

ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ದೆಶಕರಾದ ಅನಿಲ್ ಕೊನಾ ದೆವಾಸ್ತ ಮಾತನಾಡಿ, ಈ ಕಿರುಚಿತ್ರಗಳಲ್ಲಿ ಯಾವುದೇ ರೀತಿಯಲ್ಲಿ ಮಕ್ಕಳು ಸಮಸ್ಯೆಗಳಿಗೆ ಒಳಗಾದಾಗ ಇಲಾಖೆಯಡಿ ಇರುವ ಸೌಲಭ್ಯಗಳು, ರಕ್ಷಣಾ ಮತ್ತು ಪುನರ್ವಸತಿ ವ್ಯವಸ್ಥೆಗಳ ಪರಿಚಯ ಮಾಡಲಾಗಿದೆ. ಈ ಕಿರುಚಿತ್ರಗಳು ಹೆಚ್ಚೆಚ್ಚು ಜನ ಸಮುದಾಯಗಳಿಗೆ ತಲುಪುವ ಮೂಲಕ ಜಿಲ್ಲೆಯಲ್ಲಿ ಮಕ್ಕಳಿಗೆ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಎಚ್.ಕೆ. ಸುರೇಶ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಎಚ್.ಕೆ. ಕೋಮಲಾ, ಸದಸ್ಯರಾದ ವಿ.ಗೀತಾ, ನಿವೃತ್ತ ಶಿಕ್ಷಕರಾದ ಶೇಷಮ್ಮ, ಆದಿ ಚುಂಚನಗಿರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಚಂದ್ರಶೇಖರ್, ವಕೀಲ ಎಸ್.ಆರ್. ಮನು ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net