

ಚಿತ್ರದುರ್ಗ: ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಜನ್ಮ ದಿನಾಚರಣೆ ಅಂಗವಾಗಿ ನಗರದ ದೇವರಾಜ ಅರಸು ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ, ಮಕ್ಕಳ ದಿನಾಚರಣೆ ಹಾಗೂ 8 ದಿನಗಳ ಕಾಲ ನಡೆದ ಅಂತರ ಶಾಲಾ ಮಟ್ಟದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಮತ್ತು ಪದಕ ವಿತರಣೆ ಕಾರ‌್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸಂಸ್ಥೆ ಆಡಳಿತಾಧಿಕಾರಿ ಚಂದ್ರಕಲಾ ಮಾತನಾಡಿ, ಮಕ್ಕಳೆಂದರೆ ದೇವರ ಸಮಾನ, ಅವರಲ್ಲಿ ಕಪಟತನ ಇರುವುದಿಲ್ಲ. ಯಾವ ಮನೆಯಲ್ಲಿ ಮಗು ಕುಣಿದು ಕುಪ್ಪಳಿಸಿ ಆನಂದಿಸುತ್ತದೆಯೋ ಅಂತಹ ಮನೆಯಲ್ಲಿ ಸಂಭ್ರಮವಿರುತ್ತದೆ. ನೆಹರು ಅವರಿಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಅದಕ್ಕಾಗಿ ಅವರ ಜನ್ಮ ದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು.
ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರಬಹುದು. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಕ್ರೀಡಾ ಮನೋಭಾವದಿಂದ ಆಡಬೇಕು. ಸೋತವರು ಮುಂದೆ ಗೆಲ್ಲಲು ಶ್ರಮಿಸಬೇಕೆಂದರು. ಬಿ.ಇಡಿ ಕಾಲೇಜು ಪ್ರಾಚಾರ್ಯ ಡಾ.ಅನಂತರಾಮು, ಪ.ಪೂ. ಕಾಲೇಜು ಪ್ರಾಚಾರ‌್ಯ ಕೇಶವಮೂರ್ತಿ ಇದ್ದರು.
ಪಾರ್ಶ್ವನಾಥ ವಿದ್ಯಾಸಂಸ್ಥೆ
ಚಿತ್ರದುರ್ಗ ಪಾರ್ಶ್ವನಾಥ್ ವಿದ್ಯಾಸಂಸ್ಥೆಯಿಂದ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಶುಕ್ರವಾರ ಮಕ್ಕಳ ದಿನವನ್ನು ಆಚರಿಸಲಾಯಿತು. ವಿವಿಧ ದೇಸಿ ಆಟಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆ ಆಡಳಿತ ಮಂಡಳಿ ಕಾರ‌್ಯದರ್ಶಿ ಸುರೇಶ್ ಕುಮಾರ್, ನಿರ್ದೇಶಕರಾದ ಸುರೇಶ್ ಪಟಿಯಾರ್, ಮುಖ್ಯ ಶಿಕ್ಷಕಿ ನಾಜಿಮಾ, ವಿಜಯಲಕ್ಷ್ಮೀ, ಶಾಂತಾ,ನಾಗರಾಜ್ ಬೇದ್ರೆ ಇದ್ದರು.
...