ಮಕ್ಕಳು ಗರ್ಭ ಎಫ್​ಐಆರ್‌ಗೆ ಸೂಚನೆ

meeting
ಬೀದರ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಮಾತನಾಡಿದರು. ಸದಸ್ಯ ಶಶಿಧರ ಕೋಸಂಬೆ, ರಾಘವೇಂದ್ರ ಎಚ್.ಸಿ., ಕೆ.ಎಂ.ಸತೀಶ್, ವೆಂಕಟೇಶ ಇದ್ದರು.
Published on

ಬೀದರ್: ಜಿಲ್ಲೆಯಲ್ಲಿ ೧೮ ವರ್ಷದೊಳಗಿನ ಹತ್ತು ಮಕ್ಕಳು ಗರ್ಭಧಾರಣೆ ಮಾಡಿರುವ ಕುರಿತು ತಕ್ಷಣ ಎï‌ಐಆರ್ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದರೆ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಲಿದೆ ಎಂದು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ, ಸದಸ್ಯ ಶಶಿಧರ ಕೋಸಂಬೆ ಹೇಳಿದರು.

ಇಲ್ಲಿ ಜಿಪಂ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಈ ವಿಷಯ ಬಗ್ಗೆ ಗಂಭೀರ ಚರ್ಚೆ ನಡೆಯಿತು. ೧೮ ವರ್ಷದೊಳಗಿನ ಏಳು ಮಕ್ಕಳು ಗರ್ಭ ಧರಿಸಿದ್ದಾರೆ ಎಂದು ಡಿಎಚ್‌ಒ ಡಾ.ರತಿಕಾಂತ ಸ್ವಾಮಿ ಹೇಳಿದರೆ, ಬ್ರಿಮ್ಸ್​ನಲ್ಲಿ ಮೂರು ಮಕ್ಕಳು ಗರ್ಭ ಧರಿಸಿದ್ದು ಗಮನಕ್ಕೆ ಬಂದಿದೆ ಎಂದು ಡಾ.ಮಹೇಶ ಬಿರಾದಾರ ಸಭೆ ಗಮನಕ್ಕೆ ತಂದರು. ಜಿಲ್ಲೆಯಲ್ಲಿ ೧೦ ಮಕ್ಕಳು ಗರ್ಭ ಧರಿಸಿದರೂ ಎಫ್ಐಆರ್ ಏಕೆ ದಾಖಲಿಸಿಲಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರಾಜ್ಯದಲ್ಲಿ ೪೫ ಸಾವಿರಕ್ಕೂ ಅಧಿಕ ಮಕ್ಕಳು ಗರ್ಭಧಾರಣೆ ಆಗಿದ್ದು ಗಮನಕ್ಕೆ ಬಂದಿದೆ. ಆದರೆ ಜಿಲ್ಲೆಯಲ್ಲಿ ಕೇವಲ ೧೦ ಪ್ರಕರಣಗಳು ಇವೆ ಎಂದು ಅಧಿಕಾರಿಗಳು ನೀಡಿದ ಹೇಳಿಕೆಯಲ್ಲಿ ಸಂಶಯ ಇದೆ. ಇಂಥ ಗಂಭೀರ ವಿಷಯ ಕುರಿತು ಈವರೆಗೂ ಠಾಣೆಯಲ್ಲಿ ಕೇಸ್ ದಾಖಲಿಸಿಲ್ಲ. ತಕ್ಷಣ ೧೦ ಗರ್ಭಧಾರಣೆ ಕುರಿತು ಎï‌ಐಆರ್ ದಾಖಲಿಸಬೇಕು ಎಂದು ಕೋಸಂಬೆ ಸೂಚನೆ ನೀಡಿದರು.

ಬಾಲ್ಯವಿವಾಹ ನಿಷೇಧಿಸುವಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತರು, ಶಿಕ್ಷಕರು, ಕಂದಾಯ ಅಧಿಕಾರಿಗಳು ಪ್ರಯತ್ನಿಸಬೇಕು. ಗ್ರಾಮೀಣ ಭಾಗದಲ್ಲಿ ಗ್ರಾಪಂ ವತಿಯಿಂದ ಪ್ರತಿ ಹಳ್ಳಿಯಲ್ಲಿ ಸಭೆ ಮಾಡಿ ಜಾಗೃತಿ ಮೂಡಿಸಬೇಕು. ರಾಜ್ಯದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳು, ಶಾಲೆಗಳ ಮುಖ್ಯಗುರು ಹಾಗೂ ವಸತಿನಿಲಯ ಮೇಲ್ವಿಚಾರಕರು ಇಂಥ ಪ್ರಕರಣಗಳು ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಕೆ.ನಾಗಣ್ಣಗೌಡ ನಿರ್ದೇಶನ ನೀಡಿದರು.

ಡಿವೈಎಸ್ಪಿ ಕೆ.ಎಂ. ಸತೀಶ್ ಮಾತನಾಡಿ, ಬಾಲ್ಯವಿವಾಹಗಳನ್ನು ಪ್ರಾಥಮಿಕ ಹಂತದಲ್ಲಿಯೇ ತಡೆಯಬೇಕಾಗಿದೆ. ಇಂಥ ಪ್ರಕರಣಗಳು ಗಮನಕ್ಕೆ ಬಂದರೆ ಸಾರ್ವಜನಿಕರು ಪೊಲೀಸ್ ಸಹಾಯವಾಣಿ ೧೧೨ಗೆ ಕರೆ ಮಾಡಿ ಗಮನಕ್ಕೆ ತರಬೇಕು. ಕೇವಲ ೧೫ ನಿಮಿಷದಲ್ಲಿ ಪೊಲೀಸರು ಸ್ಥಳಕ್ಕೆ ಬರುತ್ತಾರೆ ಎಂದು ಹೇಳಿದರು.

ಆಯೋಗದ ಮಾಜಿ ಅಧ್ಯಕ್ಷ ರಾಘವೇಂದ್ರ ಎಚ್.ಸಿ., ಜಿಲ್ಲಾ ಮಕ್ಕಳ ಹಕ್ಕುಗಳ ಸಮಿತಿ ಅಧ್ಯಕ್ಷೆ ರಜಿಯಾ ಬಳಬಟ್ಟಿ, ಬಾಲ್ಯವಿವಾಹ ವಿರೋಧಿ ವೇದಿಕೆಯ ವೆಂಕಟೇಶ ಬಿ., ಜಿಪಂ ಸಿಇಒ ಶಿಲ್ಪಾ ಎಂ., ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪ ನಿರ್ದೇಶಕ ಪ್ರಭಾಕರ, ಜಿಪಂ ಉಪ ಕಾರ್ಯದರ್ಶಿ ಸೂರ್ಯಕಾಂತ ಬಿರಾದಾರ್ ಇತರರಿದ್ದರು.

ವಸತಿನಿಲಯದಲ್ಲಿ ಕಳಪೆ ಆಹಾರ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುವ ತಾಲೂಕಿನ ಕಪಲಾಪುರದ ಅಬ್ದುಲ್ ಕಲಾಂ ವಸತಿ ನಿಲಯದಲ್ಲಿನ ಕಳಪೆ ಆಹಾರವನ್ನು ಸಭೆಯಲ್ಲಿ ಪ್ರದರ್ಶಿಸಲಾಯಿತು. ಇದಕ್ಕೂ ಮುನ್ನ ವಸತಿನಿಲಯಕ್ಕೆ ಆಯೋಗದ ಅಧ್ಯಕ್ಷ ಮತ್ತು ಸದಸ್ಯರು ಭೇಟಿ ನೀಡಿ ಅಲ್ಲಿನ ದವಸ-ಧಾನ್ಯದಲ್ಲಿ ಹುಳು ಇರುವುದು ಪತ್ತೆಯಾಗಿತ್ತು ಮತ್ತು ಕೊಳತೆ ತರಕಾರಿ ಆಹಾರದಲ್ಲಿ ಬಳಕೆ ಮಾಡುತ್ತಿರುವುದು ಕಂಡುಬಂದಿತು. ಸಭೆಯಲ್ಲಿ ಕಳಪೆ ಆಹಾರ ಪ್ರದರ್ಶನ ಮಾಡಿ ಮಾತನಾಡಿದ ಆಯೋಗದ ಸದಸ್ಯ ಶಶಿಧರ ಕೋಸಂಬೆ, ದವಸ-ಧಾನ್ಯ ಸರಬರಾಜು ಮಾಡುವ ಗುತ್ತಿಗೆದಾರರಿಗೆ ಕಪ್ಪು ಪಟ್ಟಿಗೆ ಸೇರಿಸಿ ಆಯೋಗಕ್ಕೆ ಮಾಹಿತಿ ನೀಡಿಬೇಕು ಎಂದು ಸೂಚನೆ ನೀಡಿದರು.

ಮಕ್ಕಳ ಕಳ್ಳ ಸಾಗಣೆಯಲ್ಲಿ ಕರ್ನಾಟಕ ದೇಶದಲ್ಲಿ ೩ನೇ ಸ್ಥಾನದಲ್ಲಿದೆ. ಇದನ್ನು ತಡೆಗಟ್ಟಲು ಎಲ್ಲ ಸಂಘ-ಸಂಸ್ಥೆ, ಸರ್ಕಾರಿ ಅಧಿಕಾರಿಗಳು ಗಂಭೀರವಾಗಿ ಪ್ರಯತ್ನಿಸಬೇಕು. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು.
| ಕೆ.ನಾಗಣ್ಣಗೌಡ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net