ಮಕ್ಕಳು ಕಥೆಗಳನ್ನು ಓದಲಿ

5 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಾನವ ನಾಗರಿಕತೆಯಷ್ಟೇ ಕಥೆಯ ಮೂಲ ಪ್ರಾಚೀನವಾಗಿದೆ. ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯ ವ್ಯಕ್ತಿಯನ್ನಾಗಿ ಪರಿವರ್ತಿಸುವ ಶಕ್ತಿ ಕಥೆಗಳಿಗಿದೆ ಎಂದು ಹಿರೇಮಲ್ಲೂರ ಈಶ್ವರನ್ ಕಾಲೇಜಿನ ಪ್ರಾಚಾರ್ಯ ಶಶಿಧರ ತೋಡಕರ ಹೇಳಿದರು.
ನಗರದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯು ಕಲಬುರ್ಗಿ ವಿಭಾಗ ಮಟ್ಟದ 6 ಜಿಲ್ಲೆಗಳ 10 ಬಾಲಮಂದಿರಗಳ ಬಾಲಕ, ಬಾಲಕಿಯರ ಮಕ್ಕಳಿಗೆ ಏರ್ಪಡಿಸಿರುವ 7 ದಿನಗಳ ವಸತಿಯುತ ಮಕ್ಕಳ ಕಥಾ ಕಮ್ಮಟ ಶಿಬಿರಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕಥೆಗಳು ಮಕ್ಕಳ ಮನೋವಿಕಾಸ ಹೆಚ್ಚಿಸುವಲ್ಲಿ ಮಹತ್ವದ್ದಾಗಿದೆ. ಕನ್ನಡ ನೆಲದ ಮೊದಲ ಕಥಾ ಲೋಕ ವಡ್ಡಾರಾಧನೆ ಕೃತಿ ಮೂಲಕ ತೆರೆದುಕೊಳ್ಳುವುದು. ಪಂಚತಂತ್ರ ಕಥೆಗಳನ್ನು ಅವಲೋಕಿಸಿದಾಗ ಒಳ್ಳೆ ಮತ್ತು ಕೆಟ್ಟ ಅಂಶ ಗುರುತಿಸಿ ಜೀವನಕ್ಕೆ ಬೇಕಾಗುವ ನೀತಿ ಪಾಠಗಳನ್ನು ಅಳವಡಿಸಿಕೊಳ್ಳುವಂತೆ ರಚಿಸಲಾಗಿದೆ. ಇಂತಹ ಕಥೆಗಳನ್ನು ನಮ್ಮ ಮಕ್ಕಳು ಓದುವಂತಾಗಬೇಕು. ಮಕ್ಕಳು ದೇಶದ ಆಸ್ತಿಯಾಗಬೇಕಾದರೆ ಅವರಲ್ಲಿ ನೈತಿಕ ಗುಣಮಟ್ಟ ಕಟ್ಟಿಕೊಡಬೇಕು. ಇದು ಕಥೆಗಳನ್ನು ಓದುವ ಮತ್ತು ರಚಿಸುವ ಮೂಲಕ ಸಾಧ್ಯವಾಗುವುದು ಎಂದರು.
ಅಕ್ಷರ ಜ್ಞಾನದಿಂದ ಅರಿವಿನ ವಿಸ್ತಾರ ಹೆಚ್ಚಿಸಿಕೊಳ್ಳಲು ಸಾಧ್ಯವಾಗುವುದು. ಅದಕ್ಕಾಗಿ ಮಕ್ಕಳು ಮೊದಲು ಸರಿಯಾಗಿ ಓದುವುದನ್ನು, ಬರೆಯುವುದನ್ನು ಮಾಡಬೇಕು. ಈ ಏಳು ದಿನಗಳಲ್ಲಿ ನೀವು ಭರವಸೆಯ ಬಾಲ ಸಾಹಿತಿಗಳಾಗಿ ರೂಪಗೊಳ್ಳುವಂತಾಗಬೇಕು ಎಂದರು.
ಡಾ. ನಿಂಗು ಸೊಲಗಿ ಮಾತನಾಡಿ, ಕಥಾ ಕಮ್ಮಟವು ಕಥೆಯನ್ನು ಉಳಿಸಿ ಬೆಳಸುವ ಪರಂಪರೆಯಾಗಬೇಕು. ಕಥೆ ಬರೆಯುತ್ತಾ ಒಳ್ಳೆ ಕಥೆಗಾರರಾಗುತ್ತೀರಿ. ಕಲ್ಪನಾ ಶಕ್ತಿ ಹೆಚ್ಚಿಸಿಕೊಳ್ಳಲು ಇಂತಹ ಕಮ್ಮಟಗಳು ಸಹಕಾರಿ. ಇದರ ಸದುಪಯೋಗವನ್ನು ಮಕ್ಕಳು ಪಡೆಯಬೇಕು ಎಂದರು.
ಶಂಕರ ಹಲಗತ್ತಿ ಮಾತನಾಡಿ, ಇಂದಿನ ಮಕ್ಕಳು ಆಲೋಚನಾ ಶಕ್ತಿ ತುಂಬಾ ವೇಗವಾಗಿದೆ. ಇಂದಿನ ತಂತ್ರಜ್ಞಾನ ಮಕ್ಕಳ ಕಲ್ಪನಾ ಲೋಕವನ್ನೇ ಕಸಿದುಕೊಂಡು ಸಿದ್ಧ ಮಾದರಿಯನ್ನು ಅನುಸರಿಸುವಂತಾಗಿ ಇಂದು ಮಕ್ಕಳು ಯೋಚಿಸುವ ಶಕ್ತಿ ಕಳೆದುಕೊಳ್ಳುವ ಅಪಾಯಕ್ಕೆ ತಲುಪಿಬಿಟ್ಟಿದ್ದಾರೆ. ಇಂತಹ ಮಕ್ಕಳ ಕಥಾ ಕಮ್ಮಟಗಳಿಂದ ಮಕ್ಕಳಲ್ಲಿ ಕ್ರಿಯಾಶೀಲತೆ ಆಲೋಚಿಸುವ ಮನಸ್ಸನ್ನು ವೃದ್ಧಿಸುವವು ಎಂದರು.
ಕಥಾ ಕಮ್ಮಟದಲ್ಲಿ ಬಳ್ಳಾರಿ, ಕಲಬುರ್ಗಿ, ಬೀದರ, ಕೊಪ್ಪಳ, ಯಾದಗಿರಿ, ರಾಯಚೂರ ಜಿಲ್ಲೆಯ 60 ಮಕ್ಕಳು ಭಾಗವಹಿಸಿದ್ದಾರೆ. ಕರ್ನಾಟಕ ಬಾಲವಿಕಾಸ ಅಕಾಡೆಮಿ ಯೋಜನಾಧಿಕಾರಿ ಭಾರತಿ ಶೆಟ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಎ. ಮುತ್ತಣ್ಣ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net