

ಬೆಟ್ಟದಪುರ: ಮಕ್ಕಳು ಪೌಷ್ಟಿಕ ಆಹಾರ ಸೇವನೆ ಮಾಡುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಪಿಡಿಒ ಕೆ.ಕೆ.ಶ್ರೀದೇವಿ ಸಲಹೆ ನೀಡಿದರು.
ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಮಾತನಾಡಿದರು.
ಮಕ್ಕಳಲ್ಲಿನ ಅಪೌಷ್ಟಿಕತೆ ನಿರ್ಮೂಲನೆ ಮಾಡುವ ಉದ್ದೇಶದಿಂದ ಪ್ರತಿ ಮಕ್ಕಳಿಗೂ ಪೌಷ್ಟಿಕ ಆಹಾರ ದೊರಕಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
ನಿಮ್ಮೂರಿನಲ್ಲಿ ಶಾಲೆ ಬಿಟ್ಟಿರುವ ಮಕ್ಕಳಿದ್ದರೆ ಶಿಕ್ಷಕರ ಗಮನಕ್ಕೆ ತರಬೇಕು. ಪ್ರತಿಯೊಬ್ಬರು ಶಿಕ್ಷಣ ಪಡೆಯುವ ಮೂಲಕ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಬೇಕು. ಮಕ್ಕಳಿಗಾಗಿ ಇರುವ ಮೂಲಭೂತ ಹಕ್ಕುಗಳ ಬಗ್ಗೆ ಪ್ರಾಥಮಿಕ ಹಂತದಿಂದಲ್ಲೇ ಅರಿವು ಪಡೆದುಕೊಳ್ಳಿ ಎಂದರು.
ಗ್ರಾ.ಪಂ. ಸದಸ್ಯರಾದ ಧರಣೇಶಪ್ಪ, ಸರಸ್ವತಿ ಅರುಣ್, ಶಿಕ್ಷಕರಾದ ಎಸ್.ಮಹೇಶ್, ಪುಟ್ಟರಾಜು, ಮಮತಾ, ಗಾಲಿಸಾಬ್ ಬಾಗಲಕೋಟೆ, ಸಿ.ಎನ್.ರಶ್ಮಿ, ಬಿಲ್ ಕಲೆಕ್ಟರ್ ರಮಣಯ್ಯ, ಕ್ಲರ್ಕ್ ಮಹೇಂದ್ರ, ಅಂಗನವಾಡಿ ಕಾರ್ಯಕರ್ತೆ ಆಶಾ ಇದ್ದರು.