ಮಕ್ಕಳು ಆರೋಗ್ಯದ ಅರಿವು ಹೊಂದಿ

06 YERRISWAMY 03
Published on

ಬಳ್ಳಾರಿ : ಮಕ್ಕಳು ಶಾಲೆಯಲ್ಲಿ ಶಿಕ್ಷಣ ಪಡೆಯುವುದಲ್ಲದೇ ಆರೋಗ್ಯ ಕಾರ್ಯಕ್ರಮಗಳ ಶಿಕ್ಷಣದ ಅರಿವು ಹೊಂದಬೇಕು ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಹೇಳಿದರು.
ತಾಲೂಕಿನ ಕೊಳಗಲ್ ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಗ್ರಾಪಂ ಗಳ ಸಹಯೋಗದೊಂದಿಗೆ ಮಂಗಳವಾರ ನಡೆದ ಆರೋಗ್ಯ ಸಿಂಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯದಲ್ಲಿಯೇ ಜಿಲ್ಲೆಯಲ್ಲಿ ಆರೋಗ್ಯ ಸಿಂಚನ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲ ತಾಲೂಕುಗಳ 713 ಶಾಲೆಗಳಲ್ಲಿ 7 ರಿಂದ 10 ನೇ ತರಗತಿ ಓದುತ್ತಿರುವ ಎಲ್ಲ ಸರ್ಕಾರಿ ಅನುದಾನಿತ, ಅನುದಾನ ರಹಿತ ಶಾಲಾ ಮಕ್ಕಳಿಗೆ ಆರೋಗ್ಯ ಜಾಗೃತಿ ಮೂಡಿಸುವ ಆರೋಗ್ಯ ಸಿಂಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಂದಿನ ಪೀಳಿಗೆಯು ಸದೃಢವಾಗಬೇಕೆಂದರೆ ಶಾಲಾ ಮಕ್ಕಳು ಆರೋಗ್ಯದ ಬಗ್ಗೆ ಹೆಚ್ಚು ಅರಿವು ಮತ್ತು ಜಾಗೃತಿ ಹೊಂದಬೇಕು. ಹಾಗೆಯೇ ತಮ್ಮ ನೆರೆಹೊರೆಯವರಿಗೂ ಇದರ ಕುರಿತು ತಿಳಿಸಬೇಕು ಎಂದರು.
ಡಿಎಚ್‌ಒ ಡಾ.ವೈ.ರಮೇಶ್‌ಬಾಬು ಮಾತನಾಡಿ, ಮಕ್ಕಳಲ್ಲಿ ಆರೋಗ್ಯ ಜಾಗೃತಿ ನೀಡುವುದರ ಜತೆಗೆ ಡೆಂೆ, ಕ್ಷಯರೋಗ, ಕುಷ್ಠರೋಗ, ಬಾಲ್ಯವಿವಾಹ, ಋತುಚಕ್ರ ನಿರ್ವಹಣೆ, ಕೈತೊಳೆಯುವ ವಿಧಾನಗಳು, ತ್ಯಾಜ್ಯ ನಿರ್ವಹಣೆಗಳ ಮಾಹಿತಿ ಪ್ರತಿಯೊಬ್ಬರೂ ಪಡೆಯಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್‌ಕುಮಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಆರೋಗ್ಯ ಜಾಗೃತಿ ಕಾರ್ಯಕ್ರಮಗಳ ಕುರಿತು ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ಬಳಿಕ ವಿದ್ಯಾರ್ಥಿಗಳಿಗೆ ಹದಿಹರೆಯದ ಆರೋಗ್ಯ, ಬಾಲ್ಯವಿವಾಹ ದುಷ್ಪರಿಣಾಮಗಳು, ಡೆಂೆ ಕಾಲರಾ, ಕ್ಷಯರೋಗ, ತ್ಯಾಜ್ಯ ನಿರ್ವಹಣೆ, 108 ಅಂಬ್ಯುಲೆನ್ಸ್, ಅನೀಮಿಯಾ, ಐಯೋಡಿನ್ ಮುಂತಾದವು ಸೇರಿದಂತೆ 17 ವಿಡಿಯೋ ತುಣುಕುಗಳನ್ನು ಪ್ರದರ್ಶಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net