ಮಕ್ಕಳಿಗೆ ಸೂಕ್ತ ಮಾರ್ಗದರ್ಶ ನೀಡಿ

8 vikram 12
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಹಪಠ್ಯ ಚಟುವಟಿಕೆಗಳು ಮಾನಸಿಕ, ದೈಹಿಕವಾಗಿ ನಮ್ಮನ್ನು ಬಲಿಷ್ಠರನ್ನಾಗಿಸುತ್ತವೆ. ಅಲ್ಲದೆ ಶಿಕ್ಷಕರರಲ್ಲಿನ ಸಹಪಠ್ಯ ಚಟುವಟಿಕೆಗಳು ಮಕ್ಕಳಲ್ಲಿ ಓದು, ಬರಹ ಮತ್ತು ಕ್ರೀಡಾ ಆಸಕ್ತಿ ಬೆಳೆಸಲು ಸಹಕಾರಿಯಾಗಿವೆ ಎಂದು ಶಾಲಾ ನಾಯಕತ್ವ, ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣೆ ವಿಭಾಗದ ನಿರ್ದೇಶಕ ಬಿ.ಎಸ್. ರಘುವೀರ ಹೇಳಿದರು.
ನಗರದ ರಾಯಾಪುರದ ಜ್ಞಾನ ವಿಕಾಸ ತರಬೇತಿ ಸಂಸ್ಥೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಾಷ್ಟ್ರೀಯ ಶಿಕ್ಷಕರ ಕಲ್ಯಾಣ ಪ್ರತಿಷ್ಠಾನ, ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಹಾಗೂ ಶಿಕ್ಷಕರ ಕಲ್ಯಾಣ ನಿಧಿ, ಜಿಲ್ಲಾಡಳಿತ, ಜಿಪಂ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ರಾಜ್ಯ ಮಟ್ಟದ ಸ್ಪರ್ಧೆಯ 2ನೇ ದಿನದ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಮಾರ್ಗದರ್ಶನ ನೀಡಬೇಕು. ಶಿಕ್ಷಕ ವೃತ್ತಿಯಲ್ಲಿ ಅನೇಕ ಸವಾಲುಗಳಿರುತ್ತವೆ. ಅವುಗಳನ್ನು ಎದುರಿಸಿ ಮಕ್ಕಳಿಗೆ ಸರಿಯಾದ ದಾರಿ ತೋರಿಸುವುದು ಶಿಕ್ಷಕರ ಕರ್ತವ್ಯ ಎಂದರು.
ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ, ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಜಿ.ಎನ್.ಮಠಪತಿ, ದೈಹಿಕ ಶಿಕ್ಷಣ ಪರಿವೀಕ್ಷಕ ಬಿ.ಜಿ. ತೊಗರಿ, ಅಧಿಕಾರಿಗಳಾದ ಶಿವಲೀಲಾ ಕಳಸಣ್ಣವರ, ಪ್ರಕಾಶ ಭೂತಾಳಿ, ರೇಖಾ ಭಜಂತ್ರಿ, ಪೂರ್ಣಿಮಾ ಮುಕ್ಕುಂದಿ, ಬಿ.ಬಿ.ದುಬ್ಬದಮರಡಿ, ವೈ.ಐ. ಹುಬ್ಬಳ್ಳಿ, ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಜಿಲ್ಲೆಯ 240 ಪ್ರೌಢಶಾಲಾ ಹಂತದ ಸ್ಪರ್ಧಾಳುಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net