ಮಕ್ಕಳಿಗೆ ಸರಳವಾದ ವಚನಗಳನ್ನು ಹೇಳಿಕೊಡಿ

2
Published on

ಅಕ್ಕಮಹಾದೇವಿ, ಬಸವಣ್ಣನವರು ಸೇರಿದಂತೆ ಇತರರ ಸರಳ ವಚನಗಳನ್ನು ಮಕ್ಕಳಿಗೆ ಪಾಲಕರು ಹೇಳಿಕೊಡಬೇಕು ಎಂದು ಇನ್ಫೋಸಿಸ್ ಫೌಂಡೇಷನ್ ಸಂಸ್ಥಾಪಕಿ ಡಾ.ಸುಧಾಮೂರ್ತಿ ಹೇಳಿದರು.


ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ಕದಳಿ ಮಹಿಳಾ ಬಳಗಗಳ ಸಹಯೋಗದಲ್ಲಿ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಠಿಣ ವಚನಗಳ ಬದಲಿಗೆ ಸರಳ ವಚನಗಳನ್ನು ಕಲಿಸಿ. ಅದು ಮಕ್ಕಳಿಗೆ ಅರ್ಥವಾಗದೆ ಹೋಗಬಹುದು. ಅವರಿಗೆ ತಿಳಿವಳಿಕೆ ಬಂದಾಗ ಅದು ಅರ್ಥವಾಗುತ್ತದೆ. ಜೀವನದ ಫಿಲಾಸಫಿ(ತತ್ವಶಾಸ್ತ್ರ) ಅಡಕವಾಗಿರುವುದೇ ವಚನದಲ್ಲಿ. ಇದುವೇ ಬದುಕಿನ ನಿಷ್ಠೆ, ಸಂಸ್ಕಾರ ಮತ್ತು ಸಂಸ್ಕೃತಿ ಕಲಿತುಕೊಳ್ಳಲು ಅನುಕೂಲವಾಗಲಿದೆ ಎಂದರು.
ಸಾಹಿತ್ಯ ಎಂದರೆ ಬರೀ ಶಬ್ದವಲ್ಲ. ದೇಶ ಎಂದರೆ ನೆಲವಷ್ಟೇ ಅಲ್ಲ. ಸಾಹಿತ್ಯ ಮತ್ತು ದೇಶ ಎಂದರೆ ಭಾವನೆಗಳಾಗಿದ್ದು, ಮನುಷ್ಯರನ್ನು ಸೇರಿಸುವ ಕೊಂಡಿ ಅದು. ಆದ್ದರಿಂದ ವಚನ ಕಲಿಸಿ ಸಂಸ್ಕಾರ, ಸಂಸ್ಕೃತಿಯನ್ನು ಯುವಪೀಳಿಗೆ ವರ್ಗಾವಣೆ ಮಾಡಬೇಕು ಎಂದರು.

800 ವರ್ಷಗಳ ಹಿಂದೆಯೇ ಮಹಿಳಾ ಜೀವನದ ಗುರಿ ತಿಳಿದುಕೊಂಡವರು ಅಕ್ಕಮಹಾದೇವಿ. ಅನ್ಯಾಯವನ್ನು ಎದುರಿಸಿ ನಿಂತ ದಿಟ್ಟ ಮಹಿಳೆ ಅವರು. ಮಹಿಳೆ ಪ್ರಾತಿನಿಧ್ಯವಿಲ್ಲದ ಸಂದರ್ಭದಲ್ಲಿ ಅನುಭವ ಮಂಟಪದಲ್ಲಿ ವಚನ, ಮಾತುಗಳ ಮೂಲಕ ಬೆರಗುಗೊಳಿಸಿದವರು. ಸಾಹಿತ್ಯ ದೃಷ್ಟಿಯಲ್ಲಿ ಅವರ ವಚನ ಸಾಹಿತ್ಯ ಶ್ರೇಷ್ಠ ಎನಿಸಿಕೊಂಡಿದೆ. ಬೇರೆಯವರ 2 ವಚನ ಓದುವುದು, ಅಕ್ಕಮಹಾದೇವಿಯವರ 1 ವಚನ ಓದುವುದಕ್ಕೆ ಸಮವಾಗಿದೆ. ಅದು ಅವರ ಸರಳ, ಪ್ರೌಢಿಮೆ, ಸಾಹಿತ್ಯ ಕೃಷಿಗೆ ಸಾಕ್ಷಿ. ಅಕ್ಕಮಹಾದೇವಿ ವಚನಗಳು ವಿಪುಲ ಶಬ್ದ ಭಂಡಾರ ಹೊಂದಿರುವ ಸರಳ ಸಾಹಿತ್ಯ ಎಂದರು.

ಜೀವನದಲ್ಲಿ ಸಮಸ್ಯೆ ಎದುರಾಗಿ ಧೈರ್ಯ ಕಳೆದುಕೊಂಡಾಗ ಪ್ರತಿಯೊಬ್ಬ ಮಹಿಳೆ ಅಕ್ಕಮಹಾದೇವಿಯ ಸ್ಮರಣೆ ಮಾಡಿಕೊಳ್ಳಬೇಕು. ವಿವಿಧ ಸಮಸ್ಯೆಗಳನ್ನು ಎದುರಿಸಿ ನಿಂತ ಅವರ ವಚನ ನೆನಪು ಮಾಡಿಕೊಳ್ಳಿ. ಆಗ ಸಮಸ್ಯೆಗಳಿಗೆ ಪರಿಹಾರ, ಧೈರ್ಯ ಬರಲಿದೆ ಎಂದರು.

ಧೈರ್ಯವೊಂದು ಇದ್ದರೆ ಮಹಿಳೆಯರು ಏನು ಬೇಕಾದರೂ ಸಾಧಿಸಬಹುದು. ಆ ಸಾಮರ್ಥ್ಯ ಅವಳಲ್ಲಿದೆ. ಆದರೆ, ಅಧೈರ್ಯವೇ ಮಹಿಳೆಯರಿಗೆ ದೊಡ್ಡ ಹಿನ್ನಡೆ. ಸಂಬಂಧಿಕರು, ಸಮಾಜ, ಮಕ್ಕಳು ಏನು ತಿಳಿದುಕೊಳ್ಳುತ್ತಾರೆ ಎಂಬ ಅಳುಕು ಅವರಲ್ಲಿ ಸದಾ ಕಾಡುತ್ತದೆ. ಆದರೆ, ನೈತಿಕವಾಗಿ ಮತ್ತು ಕಾನೂನಾತ್ಮಕವಾಗಿ ಸರಿಯಾಗಿದ್ದರೆ ಯಾವುದಕ್ಕೂ ಹೆದರುವ ಅಗತ್ಯವಿಲ್ಲ. ಹಿಡಿದ ಕೆಲಸದಲ್ಲಿ ಮುಂದುವರಿಯಬೇಕು ಎಂದರು.

ದುಡ್ಡು ಬಂದರೆ ಊರಿನವರೆಲ್ಲ ಬಳಗವಾಗುತ್ತಾರೆ. ಕುರೂಪಿಯೂ ಸುಂದರಿ ಆಗುತ್ತಾಳೆ. ಪ್ರತಿ ಮಾತಿಗೂ ಮನ್ನಣೆ ದೊರೆಯುತ್ತದೆ. ಆದರೆ, ಇದೆಲ್ಲ ವಾಸ್ತವವಲ್ಲ. ಇದು ಸುಳ್ಳು-ಪೊಳ್ಳು. ಅಲ್ಲದೆ ಸಾರ್ವಜನಿಕರ, ಪರರ ಹಣ ಬಂದಾಗ ಜವಾಬ್ದಾರಿ ಬರುತ್ತದೆ. ಅದನ್ನು ಸರಿಯಾಗಿ ಖರ್ಚು ಮಾಡಬೇಕು. ಹಣ ಪೋಲು ಮಾಡದೆ ಜನರ ಕಲ್ಯಾಣ, ಸಮಾಜದ ಒಳಿತಿಗೆ ಬಳಕೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿಶ್ರಾಂತ ಕುಲಪತಿ ಡಾ.ಎಸ್.ಇಂದುಮತಿ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮ.ಗು.ಸದಾನಂದಯ್ಯ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net