ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸಿ

CTD 21 DESTINI-0008
Published on


ಚಿತ್ರದುರ್ಗ:ಮಕ್ಕಳಿಗೆ ವಿದ್ಯೆ ಜತೆ ಉತ್ತಮ ಸಂಸ್ಕಾರವನ್ನೂ ಕಲಿಸಬೇಕಿದೆ ಎಂದು ಚಿಕ್ಕಮಗಳೂರು ಗೌರಿಗದ್ದೆ ಅವಧೂತಾಶ್ರಮದ ಶ್ರೀ ವಿನಯ್ ಗುರೂಜಿ ಹೇಳಿದರು.
ನಗರದ ದೇವರಾಜ್ ಅರಸ್ ಶಿಕ್ಷಣ ಸಂಸ್ಥೆ 40ನೇ ವಾರ್ಷಿಕೋತ್ಸವ ಅಂಗವಾಗಿ, ಸಂಸ್ಥೆ ಆವರಣದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ‘ಡೆಸ್ಟಿನಿ’ ಸಾಂಸ್ಕೃತಿಕ ಕಾರ‌್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಜೀವನವಿಂದು ವ್ಯಾಪಾರವಾಗುತ್ತಿದೆ. ಇಂಥ ಸಂದರ್ಭದಲ್ಲಿ ಮಕ್ಕಳಿಗೆ, ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಕಲಿಸಿ ಅವರಲ್ಲಿ ಧರ್ಮ ಪ್ರಜ್ಞೆಯನ್ನು ಜಾಗೃತಗೊಳಿಸಬೇಕಿದೆ ಎಂದರು.
ಸಂಸ್ಕೃತಿ, ಸಂಸ್ಕಾರಗಳಿಗೆ ಹೆಸರಾಗಿರುವ ಭಾರತದ ಗೌರವವಿಂದು ಜಗತ್ತಿನಲ್ಲಿ ಹೆಚ್ಚಾಗಿದೆ ಎಂದರೆ ಅದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು. ಭಾರತೀಯರ ವ್ಯಕ್ತಿತ್ವವನ್ನು ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ. ಮಕ್ಕಳಿಗೆ ದುಡ್ಡು ಮಾಡಿ, ಹಾಗೆಯೇ ಅದರ ಸದುಪಯೋಗವನ್ನು ಹೇಳಿಕೊಡಬೇಕು. ಸಾಮಾಜಿಕ ಜಾಲತಾಣಗಳ ಬಳಕೆಯಡಿ ಮಕ್ಕಳಲ್ಲಿ ಎಚ್ಚರಿಕೆ ಅಗತ್ಯ ಎಂದು ತಿಳಿಸಿದರು.
ಸಂಸ್ಥೆ ಸಂಸ್ಥಾಪಕ ಕಾರ‌್ಯದರ್ಶಿ, ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಹಿಂದುಳಿದ ಜಿಲ್ಲೆ ಚಿತ್ರದುರ್ಗದಲ್ಲಿ, 28 ವಯಸ್ಸಿಗೆ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದೆ. ಹಣ ಗಳಿಸುವ ಆಸೆ ಇದ್ದಿದ್ದರೆ ಬೆಂಗಳೂರಲ್ಲಿ ಸ್ಥಾಪಿಸುತ್ತಿದ್ದೆ. ಹಿಂದುಳಿದ ಹಾಗೂ ಬಡ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ವಿದ್ಯಾಭ್ಯಾಸ ಸಿಗಬೇಕೆಂಬುದು ನನ್ನ, ನನ್ನ ಪತ್ನಿ ಉದ್ದೇಶವಾಗಿತ್ತು. ಈ ಸಂಸ್ಥೆಯನ್ನು ನನ್ನ ಪುತ್ರ ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿದ್ದಾನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಐದು ಬಾರಿ ಶಾಸಕನಾಗಿರುವ ನನಗೆ ಬಡವರ ಕಷ್ಟ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ. ಅವರ ಸೇವೆಯಲ್ಲಿ ತೃಪ್ತಿ ಇದೆ. ಜನರ ಪ್ರೀತಿ, ವಿಶ್ವಾಸದಿಂದಾಗಿ ನಾನಿಂದು ಸಮಾಜದಲ್ಲಿ ಎತ್ತರಕ್ಕೆ ಬೆಳೆದಿದ್ದೇನೆ ಎಂದರು.
ಪಠ್ಯದೊಂದಿಗೆ, ಪಠ್ಯೇತರ ಚಟುವಟಿಕೆಗಳ ಕಡೆಯೂ ಮಕ್ಕಳನ್ನು ಪ್ರೋತ್ಸಾಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣದ ಎಲ್ಲ ಸ್ತರಗಳಿಗೂ ನಮ್ಮ ಸಂಸ್ಥೆ ಆದ್ಯತೆ ನೀಡುತ್ತಿದೆ. ವೃದ್ಧಾಶ್ರಮಗಳ ಸಂಖ್ಯೆ ನಿಯಂತ್ರಿಸಬೇಕಾದರೆ ಪಾಲಕರು ಮಕ್ಕಳಿಗೆ ವಿದ್ಯೆಯೊಂದಿಗೆ, ಸಂಸ್ಕಾರ ಕಲಿಸಬೇಕಿದೆ ಎಂದು ತಿಳಿಸಿದರು.
ಡಿಡಿಪಿಐ ಕೆ.ರವಿಶಂಕರ ರೆಡ್ಡಿ ಮಾತನಾಡಿ, ಈ ಬಾರಿಯೂ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯದಲ್ಲೇ ನಮ್ಮ ಜಿಲ್ಲೆ ನಂ. ಒನ್ ಸ್ಥಾನವನ್ನು ಪಡೆಯಲು ಪಾಲಕರ ಸಹಕಾರದ ಅಗತ್ಯವಿದೆ ಎಂದರು.
ಎಎಸ್‌ಪಿ ಕುಮಾರಸ್ವಾಮಿ ಮಾತನಾಡಿದರು. ಸಂಸ್ಥೆ ಅಧ್ಯಕ್ಷೆ ಯಶಸ್ವಿನಿ ಕಿರಣ್, ಆಡಳಿತಾಧಿಕಾರಿ ಎಚ್.ಚಂದ್ರಕಲಾ ಇದ್ದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಶಿವಶಂಕರ್, ದಾವಣಗೆರೆ ವಿವಿ ಮಟ್ಟದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಂಸ್ಥೆಯ ಪ್ರತಿಭಾವಂಥ ವಿದ್ಯಾರ್ಥಿಗಳಾದ ಕವಿತಾ, ಎಂ.ಸಲೇಹಾ ಬೇಗಂ, ಕಲ್ಪನಾ ಅವರನ್ನು ಸನ್ಮಾನಿಸಲಾಯಿತು. ಪ್ರಾಚಾರ‌್ಯ ಅನಂತರಾಮ್ ಸ್ವಾಗತಿಸಿದರು.

*ಕೋಟ್
ಸಂಸ್ಥೆ 1983ರಲ್ಲಿ ಹೈಸ್ಕೂಲ್ ಮೂಲಕ ಆರಂಭವಾಯಿತು. ಬಿಇಡಿ, ಪ್ರಥಮ ದರ್ಜೆ, ನರ್ಸಿಂಗ್, ಪಪೂ, ಆದ್ಯ ಕಾಲೇಜ್ ಆಫ್ ಫಾರ್ಮಾಸಿ, ಸಿಬಿಎಸ್‌ಸಿ ಸ್ಕೂಲ್ ಸ್ಥಾಪಿಸಲಾಗಿದೆ. ಪ್ರಕೃತಿ ಆಯುರ್ವೇದ ಮೆಡಿಕಲ್ ಕಾಲೇಜು ಕೂಡ ಆರಂಭವಾಗಲಿದೆ. ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದೆ. ನಮ್ಮ ಸಂಸ್ಥೆ ಶಾಲಾ-ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ.
ಎಂ.ಸಿ.ರಘುಚಂದನ್, ಸಂಸ್ಥೆ ಸಿಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net