ಮಕ್ಕಳಿಗೆ ಸಂಗೀತ ಕಲಿಸಲು ಮುಂದಾಗಿ

20rajesh8
Published on

ಚಾಮರಾಜನಗರ: ಮಕ್ಕಳಿಗೆ ಚಿಕ್ಕವಯಸ್ಸಿನಲ್ಲೇ ಸಂಗೀತವನ್ನು ಅಭ್ಯಾಸ ಮಾಡಿಸುವ ಮೂಲಕ ಅವರ ಭವಿಷ್ಯವನ್ನು ರೂಪಿಸಬೇಕು ಎಂದು ಖ್ಯಾತ ಜಾನಪದ ಗಾಯಕ ಡಾ.ಮಳವಳ್ಳಿ ಮಹದೇವಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಭ್ಯಾಸಿ ಟ್ರಸ್ಟ್ ವತಿಯಿಂದ ಸೋಮವಾರ ಆಯೋಜಿಸಿದ್ದ ಹಟ್ಟಿಹೈಕಳ ಜಗುಲಿ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಂಗೀತ ಎಂಬುದು ಜ್ಞಾನ, ಇದನ್ನು ಮಕ್ಕಳಿಗೆ ಕಲಿಸುವ ಕಾಳಜಿ ಪಾಲಕರಿಗೆ ಬರಬೇಕು. ಸಂಗೀತ ಎಲ್ಲರಿಗೂ ಸುಲಭವಾಗಿ ದಕ್ಕುವ ಕಲೆಯಲ್ಲ. ಅದು ಆಸಕ್ತರಿಗೆ ಮಾತ್ರ ಒಲಿಯುತ್ತದೆ. ಇಂದಿನ ಮೊಬೈಲ್ ಭರಾಟೆಯಲ್ಲಿ ಎಲ್ಲ ಮಕ್ಕಳನ್ನು ಒಂದುಗೂಡಿಸಿ, ಬೇಸಿಗೆ ಶಿಬಿರ ಆಯೋಜಿಸಿ, ಅವರಿಗೆ ಕರಕುಶಲತೆ, ನಾಟಕ ಪ್ರದರ್ಶನ ಮಾಡುವ ನಾನಾಕಲೆಗಳನ್ನು ಕಲಿಸಿರುವ ಕಾರ್ಯ ಪ್ರಶಂಸನೀಯ ಎಂದು ಹೇಳಿದರು.

ಜಾನಪದ ಕಲೆಗಳಿಗೆ ದೇಶಿಯವಾಗಿ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿದೆ. ಹೊಟ್ಟೆಪಾಡಿಗಾಗಿ ನಾನು ಜೋಳಿಗೆ ಹಿಡಿದುಕೊಂಡು ಮನೆಮನೆಗೆ ತೆರಳಿ ಹಾಡಿದೆ. ಆಗ ಕಲಿತ ಹಾಡುಗಳು ನನ್ನ ಗುರುತಿಗೆ ಈಗ ಕಾರಣವಾಗಿದೆ. ಅಮೇರಿಕಾ, ಸಿಂಗಾಪೂರ, ದುಬೈ ನಂತಹ ಹೊರ ದೇಶಗಳಿಗೂ ಸರ್ಕಾರ ಜಾನಪದ ಹಾಡು ಹಾಡಲು ಕಳುಹಿಸಿಕೊಟ್ಟಿತ್ತು. ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಇಂತಹ ಶಿಬಿರಗಳ ಆಯೋಜನೆ ಅವಶ್ಯಕವಾಗಿದೆ ಎಂದರು.

ಅಪರ ಜಿಲ್ಲಾಧಿಕಾರಿ ಗೀತಾಹುಡೇದಾ ಮಾತನಾಡಿ, ಪಾಲಕರು ಮಕ್ಕಳನ್ನು ಕೇವಲ ಅಂಕಗಳಿಸುವುದಕ್ಕೆ ಮಾತ್ರ ಸೀಮಿತಗೊಳಿಸಬಾರದು. ವ್ಯವಹಾರ ಜ್ಞಾನ ವೃದ್ಧಿಸಿಕೊಳ್ಳಲು, ತಮ್ಮಲ್ಲಿರುವ ವ್ಯಕ್ತಿತ್ವವನ್ನು ಪರಿಪೂರ್ಣವಾಗಿಸಿಕೊಳ್ಳಲು ಇಂತಹ ಬೇಸಿಗೆ ಶಿಬಿರಗಳು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಈ ವೇಳೆ ಶಿಬಿರಾರ್ಥಿಗಳು ಗೀತಾಗಾಯನ ಪ್ರಸ್ತುತಪಡಿಸಿದರು. ಬಳಿಕ ಮಕ್ಕಳು ಪ್ರದರ್ಶನ ಮಾಡಿದ ಕೋಟಿಗಾನಹಳ್ಳಿ ರಾಮಯ್ಯ ರಚನೆಯ ಒಗಟಿನ ರಾಣಿ ನಾಟಕ ನೋಡಿಗರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಅಭ್ಯಾಸಿ ಟ್ರಸ್ಟ್ ಅಧ್ಯಕ್ಷ ಕಿರಣ್ ಗಿರ್ಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡಯ್ಯ, ಮೈಸೂರು ಅರಿವು ಟ್ರಸ್ಟ್‌ನ ಡಾ.ಎಂ.ಸಿ.ಮನೋಹರ್, ಪತ್ರಕರ್ತ ನಾಗೇಶ್ ಸೋಸ್ಲೆ, ಸಂತ ಜೋಸೆಪರ ಮಹಿಳಾ ಅಭಿವೃದ್ಧಿ ಕೇಂದ್ರದ ಆಡಳಿತಾಧಿಕಾರಿ ಸಿಸ್ಟರ್ ಮರಿಯಾ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net