

ಗೋಣಿಕೊಪ್ಪ: ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಗೋಣಿಕೊಪ್ಪ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಮಟ್ಟದ ಪ್ರಬಂಧ, ಭಿತ್ತಿ ಪತ್ರ ರಚನೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.
ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಸುರಕ್ಷಿತವಾಗಿ ಚುನಾವಣೆ ನಡೆಸಲು ಅಳವಡಿಸುವ ತಂತ್ರಗಳ ಬಗ್ಗೆ ಭಿತ್ತಿ ಪತ್ರ ರಚಿಸಿದರು. ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ಚುನಾವಣೆ ಪ್ರಕ್ರಿಯೆಯಲ್ಲಿ ಮತದಾರರ ಸಾಕ್ಷರತಾ ಸಂಘಗಳ ಪಾತ್ರದ ಬಗ್ಗೆ ಮಕ್ಕಳು ಪ್ರಬಂಧ ಬರೆದರು. ಕುಟ್ಟ, ಟಿ.ಶೆಟ್ಟಿಗೇರಿ, ಬಾಳಲೆ, ಪೊನ್ನಂಪೇಟೆ, ಮಾಯಮುಡಿ, ತಿತಿಮತಿ, ಗೋಣಿಕೊಪ್ಪ ಕ್ಲಸ್ಟರ್‌ಗಳ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಕಾರ್ಯಕ್ರಮ ಉದ್ಘಾಟಿಸಿದರು. ಚುನಾವಣೆಯಲ್ಲಿ ಮತದಾನದ ಮಹತ್ವ, ಮತದಾನ, ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವು ಮೂಡಿಸಿದರು. ಮುಖ್ಯ ಶಿಕ್ಷಕ ಮಹೇಶ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪುಷ್ಪಾ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ರಾಧಾ, ತಿರುನೆಲ್ಲಿಮಡ ಜೀವನ್, ಸವಿತಾ ಕುಮಾರಿ ಇದ್ದರು.