

ಎನ್.ಆರ್.ಪುರ: ಇತ್ತೀಚಿನ ವರ್ಷಗಳಲ್ಲಿ ಚಿಕ್ಕ, ಚಿಕ್ಕ ಮಕ್ಕಳೇ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಅರವಿಂದ ಸೋಮಯಾಜಿ ಹೇಳಿದರು.
ಕುದುರೆಗುಂಡಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಜನ ಜಾಗೃತಿ ವೇದಿಕೆ ಆಶ್ರಯದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಮಕ್ಕಳಿಗೆ ಬಾಲ್ಯದಲ್ಲಿಯೇ ದುಶ್ಚಟಗಳ ಬಗ್ಗೆ ಅರಿವು ಮೂಡಿಸಿದರೆ ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಒಳ್ಳೆಯವರಾಗಿ ಬದುಕಬಹುದು. ಮದ್ಯಪಾನ, ಬೀಡಿ, ಸಿಗರೇಟು, ಡ್ರಗ್ಸ್ ಸೇವನೆ ಕಲಿತು ಜೀವನ ಬಲಿಕೊಡುತ್ತಾರೆ. ಸಹವಾಸ ದೋಷದಿಂದ ದುಶ್ಚಟಗಳನ್ನು ಮೈಗೂಡಿಸಿಕೊಂಡು ನಂತರ ಅದು ಚಟವಾಗಿ ಪರಿವರ್ತನೆಯಾಗುತ್ತದೆ ಎಂದು ಹೇಳಿದರು.
1995ರಲ್ಲಿ ಧರ್ಮಸ್ಥಳದ ಧರ್ಮಾಕಾರಿ ಡಾ.ವೀರೇಂದ್ರ ಹೆಗಡೆ ಅವರು ಪ್ರಾಯೋಗಿಕವಾಗಿ ಬೆಳ್ತಂಗಡಿ ತಾಲೂಕಿನಲ್ಲಿ ಮದ್ಯಪಾನ ನಿಷೇಧ ಜಾರಿಗೆ ತಂದಿದ್ದರು. ಆದರೆ, ಜನರು ಬೇರೆ ತಾಲೂಕಿನಲ್ಲಿ ಮದ್ಯ ತರುವುದು, ಮನೆಯಲ್ಲೇ ಕಳ್ಳಭಟ್ಟಿ ತಯಾರಿಸುವುದು ಪ್ರಾರಂಭವಾಯಿತು. ಇದನ್ನು ಮನಗಂಡ ಡಾ.ವೀರೇಂದ್ರ ಹೆಗಡೆಯವರು ಜನರಲ್ಲಿ ಮನ ಪರಿವರ್ತನೆ ಆಗದೆ ಇದ್ದರೆ ಕಾನೂನಿಂದ ಪ್ರಯೋಜನವಾಗುವುದಿಲ್ಲ ಎಂದು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಜಾರಿಗೆ ತಂದರು. ಶಾಲೆ ಮಕ್ಕಳಿಗೆ ದುಚ್ಛಟಗಳಿಂದ ದೂರ ಇರುವಂತೆ ಸಂಕಲ್ಪ ಮಾಡಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ಕುದುರೆಗುಂಡಿ ವಲಯದ ಮೇಲ್ವಿಚಾರಕ ಸುಧೀರ್ ಮಾತನಾಡಿ, ಯೋಜನೆಯಡಿ ಕೊಪ್ಪ, ಎನ್.ಆರ್.ಪುರ ತಾಲೂಕಿನಲ್ಲಿ 1700 ಸ್ವ ಸಹಾಯ ಸಂಘಗಳಿವೆ. ಯೋಜನೆಯಿಂದ ದುಚ್ಚಟ ಮುಕ್ತ ಸಮಾಜ ನಿರ್ಮಿಸಲು ಮದ್ಯವರ್ಜನ ಶಿಬಿರ ಹಮ್ಮಿಕೊಳ್ಳಲಾಗಿದೆ. ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಲು ಪ್ರೌಢ ಶಾಲೆ, ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕುದುರೆಗುಂಡಿ ಪ್ರೌಢಶಾಲೆ ಎಸ್‌ಡಿಎಂಸಿ ಸದಸ್ಯ ರಾಘವೇಂದ್ರ, ಕುದುರೆಗುಂಡಿ ವಲಯದ ಒಕ್ಕೂಟದ ಅಧ್ಯಕ್ಷ ರಾಜೇಶ್, ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್, ಸೇವಾ ಪ್ರತಿನಿಧಿ ರವಿ ಇದ್ದರು.