

ಚಾಮರಾಜನಗರ: ಉಪ್ಪಾರ ಸಮಾಜ ಆರ್ಥಿಕವಾಗಿ ಹಿಂದುಳಿದೆ. ಈ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕಿದೆ, ಮುಂದೆ ಅವರೇ ನಿಮ್ಮ ಆಸ್ತಿಗಳಾಗುತ್ತಾರೆ ಎಂದು ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು.
ಕೊಳ್ಳೇಗಾಲ ಮತ್ತು ಹನೂರು ತಾಲೂಕಿನ ಉಪ್ಪಾರ ಸಮಾಜದ ಸರ್ಕಾರಿ ನೌಕರರ ಸಂಘ ವತಿಯಿಂದ 2022-23 ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪಟ್ಟಣದ ಗುರುಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳೆ ನಮ್ಮ ಆಸ್ತಿ ಎಂಬ ಭಾವನೆ ನಮ್ಮ ಜನಾಂಗದವರಿಗೆ ಬರಬೇಕು. ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಲು ಶಿಕ್ಷಣವನ್ನು ಕೊಡಿಸಲು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ತಳಮಟ್ಟದ ಜನರು ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದೆ ಬರಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ್ದಾರೆ. ರಾಜಕೀಯ ಅಧಿಕಾರಗಳು ಸಿಗಲು ಸಹಕಾರಿಯಾಗಿದೆ. ಸಂವಿಧಾನ ಜಾರಿಗೊಂಡ ಬಳಿಕ ಬಡವರು, ಶೋಷಿತರು ಸಾವ್ವಲಂಬನೆ ಜೀವನ ನಡೆಸಲು ಅವಕಾಶವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಈ ದೇಶದ ಪ್ರಗತಿಗೆ ಅವರ ಅತ್ಯಗತ್ಯ ಎಂದರು.
ಸಂಘದ ಅಧ್ಯಕ್ಷ ಪ್ರಿಯಶಂಕರ ಮಾತನಾಡಿದರು. ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಉಪ್ಪಾರ ಜನಾಂಗದ ಸುಮಾರು 85 ಮಕ್ಕಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಗ್ರಾ.ಪಂ ಅಧ್ಯಕ್ಷ ಸಿದ್ದಶೆಟ್ಟಿ, ಉಪ್ಪಾರ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಮಾದೇಶ್, ಮೈಸೂರಿನ ಸರ್ಕಲ್ ಇನ್ಸ್‌ಪೆಕ್ಟರ್ ಮಹದೇವ ಸ್ವಾಮಿ, ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ನಂಜುಂಡಸ್ವಾಮಿ, ಯಳಂದೂರು ತಾಲೂಕು ಅಧ್ಯಕ್ಷ ರೇಚಣ್ಣ, ಉಪ್ಪಾರ ನೌಕರರ ಸಹಕಾರ ಸಂಘದ ಅಧ್ಯಕ್ಷ ರವಿ, ಗಡಿ ಯಜಮಾನ ಚಿಕ್ಕತಾಂಡಶೆಟ್ಟಿ, ಮುಳ್ಳೂರು ಪುಟ್ಟ ಅರಸಶೆಟ್ಟಿ, ರಮೇಶ್ ಇತರರು ಇದ್ದರು.