

ನೆಲಮಂಗಲ: ರಾಜ್ಯದೆಲ್ಲೆಡೆ ಆ.23ರಿಂದ ಪ್ರೌಢಶಾಲೆ ಮತ್ತು ಪದವಿ ಕಾಲೇಜು ಆರಂಭವಾದ ಹಿನ್ನೆಲೆ ಮಂಗಳವಾರ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನಗರ ಹಾಗೂ ತಾಲೂಕಿನ ಕೆಲ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲಿಗೆ ನಗರದ ಸರ್ಕಾರಿ ಜೂನಿಯರ್ ಕಾಲೇಜು ಪ್ರೌಢಶಾಲಾ ವಿಭಾಗಕ್ಕೆ ಭೇಟಿ ನೀಡಿದ ಸಚಿವರು, ಕೊಠಡಿಗಳಿಗೆ ತೆರಳಿ ಮಕ್ಕಳಿಗೆ ಧೈರ್ಯ ತುಂಬಿದರು. ಶೈಕ್ಷಣಿಕ ವರ್ಷಾರಂಭಕ್ಕೆ ಶುಭ ಹಾರೈಸಿದರು.
ಕೋವಿಡ್ 3ನೇ ಅಲೆಯ ಆತಂಕದ ನಡುವೆಯೂ ತಜ್ಞ ವೈದ್ಯರು, ಅಧಿಕಾರಿಗಳು, ಶಿಕ್ಷಕರು, ಪಾಲಕರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮಾರ್ಗಸೂಚಿ ಸಿದ್ಧಪಡಿಸಿ 9 ರಿಂದ 12ನೇ ತರಗತಿ ಆರಂಭಿಸಲಾಗಿದೆ. ರಾಜ್ಯದಾದ್ಯಂತ ತಾಲೂಕು ಆಡಳಿತ ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿ ಸಕಲ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ ಎಂದು ಬಿ.ಸಿ.ನಾಗೇಶ್ ತಿಳಿಸಿದರು.
ಸ್ಥಳೀಯ ಆಡಳಿತದಿಂದ 2 ದಿನಕೊಮ್ಮ ಸ್ಯಾನಿಟೈಸರ್ ಸಿಂಪಡಿಸಲಾಗುವುದು. ಶಿಕ್ಷಣದಿಂದ ದೂರು ಉಳಿದಿದ್ದ ವಿದ್ಯಾರ್ಥಿಗಳು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾರೆ. ರಾಜ್ಯದಾದ್ಯಂತ 8.75ಲಕ್ಷ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು, ಪದವಿ ಪೂರ್ವ ಕಾಲೇಜುಗಳಲ್ಲಿ 12 ಲಕ್ಷಕ್ಕೂ ಹೆಚ್ಚು ಪ್ರವೇಶಾತಿಗೆ (ಸೀಟು) ಅವಕಾಶ ನೀಡಲಾಗಿದೆ ಎಂದರು.
ಪ್ರಾಥಮಿಕ ಶಾಲೆ ಆರಂಭಕ್ಕೆ ಸಿದ್ಧತೆ: ಸೆ.1ರಿಂದ ಪ್ರಾಥಮಿಕ ಶಾಲೆ ಆರಂಭಿಸುವ ಉದ್ದೇಶ ಹೊಂದಿದ್ದು ಆ.31ರಂದು ತಾಂತ್ರಿಕ ಸಲಹಾ ಸಮಿತಿ ಸಭೆ ಕರೆಯಲಾಗಿದೆ. ಪ್ರಾಥಮಿಕ ಶಾಲೆಗಳ ಆರಂಭದ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದರು.
ವಿಶೇಷ ತಂಡರಚನೆ: ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡುತ್ತಿರುವ ಬಗ್ಗೆ ತಪಾಸಣೆ ಮಾಡಲು ರಾಜ್ಯದಾದ್ಯಂತ ಸ್ಥಳೀಯ ಬಿಇಒ ಹಾಗೂ ಬಿಆರ್‌ಸಿ ಒಳಗೊಂಡು ವಿಶೇಷ ತಂಡ ರಚನೆ ಮಾಡಲಾಗಿದೆ. ತರಗತಿಗೆ ಹಾಜರಾಗುವ ಮಕ್ಕಳಿಗೆ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡುವಂತೆ ಒಬ್ಬ ಶಿಕ್ಷಕರನ್ನು ನಿಯೋಜಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಶಿಕ್ಷಕರಿಗೆ ಮಾತ್ರ ಶಾಲೆಗೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಶಿಕ್ಷಕರಿಗೆ ಆರೋಗ್ಯದ ಸಮಸ್ಯೆ ಕಂಡಬಂದಲ್ಲಿ ಶಾಲೆಗೆ ಹಾಜರಾಗುವ ಅವಶ್ಯಕತೆ ಇಲ್ಲ. ಶಾಲೆಯಲ್ಲಿ ಯಾವುದೇ ತೊಂದರೆಯಾದರು ಕ್ಷೇತ್ರಶಿಕ್ಷಣಾಧಿಕಾರಿ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ ಶೇ.62ವಿದ್ಯಾರ್ಥಿಗಳು ಶಾಲೆಗೆ ಹಾಜರಾಗಿದ್ದಾರೆ. ಸರ್ಕಾರದ ಮಾರ್ಗಸೂಚಿ ಪಾಲನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಂಗಮಾರೇಗೌಡ ತಿಳಿಸಿದರು.
ಕ್ಷೇತ್ರ ಸಮಸ್ವಯಾಧಿಕಾರಿ ನರಸಿಂಹಯ್ಯ, ಶಿಕ್ಷಣ ಸಂಯೋಜಕಿ ಸುಚಿತ್ರಾ, ಅಕ್ಷರದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್, ಮುಖ್ಯಶಿಕ್ಷಕ ರೇಣುಕೇಶ್ ಮತ್ತಿತರರು ಇದ್ದರು.