

ಚನ್ನರಾಯಪಟ್ಟಣ: ಶೈಕ್ಷಣಿಕ ಹಂತದಿಂದಲೇ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ದೇಶಪ್ರೇಮ, ಭಾಷೆಯ ಬದುಕು ಹಾಗೂ ಸನಾತನ ಧರ್ಮದ ಬಗ್ಗೆ ತಿಳಿಸಿ ಎಂದು ನಿವೃತ್ತ ಸೈನಿಕ ರಾಘವೇಂದ್ರ ಸಲಹೆ ನೀಡಿದರು.
ಪಟ್ಟಣದ ರೋಟರಿ ಸಂಸ್ಥೆ ವತಿಯಿಂದ ಕಚೇರಿ ಸಭಾಂಗನದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಣ ವ್ಯವಸ್ಥೆಯಿಂದ ಮಾತ್ರ ದೇಶದ ಚರಿತ್ರೆಯ ಮೇಲೆ ಬೆಳಕು ಚೆಲ್ಲಲು ಸಾಧ್ಯ ಎಂದರು.
ರೋಟರಿ ಸಂಸ್ಥೆಯ ಲೆಫ್ಟಿನೆಂಟ್ ಎಚ್.ಎನ್.ಹೇಮಾಲತಾ ಮಾತನಾಡಿ, ದೇಶದ ಗಡಿಯಲ್ಲಿ ನಿಂತ ಸೈನಿಕರು ಹಗಲಿರುಳು ಎನ್ನದೆ ಕಾವಲು ಕಾಯುವ ಮೂಲಕ ರಕ್ಷಣೆ ನೀಡುತ್ತಿರುವುದರಿಂದ ನಾವು ಸುರಕ್ಷಿತರಾಗಿದ್ದೇವೆ. ಸೈನಿಕರಿಲ್ಲದೆ ನಾವು ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ಹುತಾತ್ಮರಾಗಿರುವ ಯೋಧರನ್ನು ಪ್ರತಿಕ್ಷಣವೂ ಸ್ಮರಿಸಬೇಕು ಎಂದರು.
ನಿವೃತ್ತ ಯೋಧರಾದ ವೆಂಕಟೇಶ್, ರಾಘವೇಂದ್ರ ಹಾಗೂ ಮಧು ಅವರನ್ನು ಗೌರವಿಸಲಾಯಿತು. ಇದಕ್ಕೂ ಮೊದಲು ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸಲಾಯಿತು. ರೋಟರಿ ಸಂಸ್ಥೆ ಅಧ್ಯಕ್ಷ ನವೀನ್, ಕಾರ್ಯದರ್ಶಿ ಬಾಬು ಜಾರ್ಜ್, ಖಜಾಂಚಿ ರಶ್ಮಿ ಮತ್ತಿತರರಿದ್ದರು.