

ಚಿತ್ರದುರ್ಗ: ಮಕ್ಕಳಿಗೆ ತಂದೆ, ತಾಯಿಯರೇ ಮಾದರಿ ಹೊರತು ಸಿನಿ ತಾರೆಯರು, ಕ್ರಿಕೆಟ್ ಸೇರಿ ಇನ್ನಿತರೆ ಕ್ರೀಡಾಪಟುಗಳಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ ಸಲಹೆ ನೀಡಿದರು.
ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿಯಿಂದ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಉದ್ಘಾಟಿಸಿ ಮಾತನಾಡಿದರು.
ಮೊಬೈಲ್, ಸಾಮಾಜಿಕ ಜಾಲತಾಣಗಳ ವ್ಯಾಮೋಹಕ್ಕೆ ಸಿಲುಕಿ ಮಕ್ಕಳು ದಾರಿ ತಪ್ಪುವ ಮುನ್ನ ಪಾಲಕರು ಹೆಚ್ಚಿನ ನಿಗಾವಹಿಸಬೇಕು. ಪ್ರತಿಭಾವಂತರನ್ನು ಗುರುತಿಸಿ ಹೊರ ತರಬೇಕು. ಸಮಾಜದಲ್ಲಿ ಉತ್ತಮ ಸಾಧನೆಗೈದು ಉನ್ನತ ಮಟ್ಟಕ್ಕೆ ಏರಿದವರನ್ನು ಮಾದರಿಯಾಗಿ ಇಟ್ಟುಕೊಳ್ಳಿ ಎಂದು ಮನವಿ ಮಾಡಿದರು.
ಪದವಿ ಪಡೆದು ಉದ್ಯೋಗ ಹುಡುಕುವ ಬದಲು ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ನೀಡುವಂತ ಉದ್ಯಮಿಗಳಾಗಲು ಮುಂದಾಗಿ ಎಂದು ಕಿವಿಮಾತು ಹೇಳಿದರು.
ಅಕಾಡೆಮಿ ಗೌರವಾಧ್ಯಕ್ಷ ಬಿ.ಕೆ.ರಹಮತ್‌ವುಲ್ಲಾ ಮಾತನಾಡಿ, ಕನ್ನಡ, ಇಂಗ್ಲಿಷ್, ಉರ್ದು ಭಾಷೆಯನ್ನು ಪ್ರತಿಯೊಬ್ಬರು ಕಲಿಯಬೇಕು. ಭಾನು ಮುಷ್ತಾಕ್‌ಗೆ ಬುಕರ್ ಪ್ರಶಸ್ತಿ ಲಭಿಸಿದಕ್ಕೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ಆದ್ದರಿಂದ ಸಾಧಕರ ಸಾಲಿಗೆ ಸೇರುವಂತ ಗುರಿ ಹೊಂದಿ ಎಂದು ಸಲಹೆ ನೀಡಿದರು.
ವಿದ್ಯೆ ಅತ್ಯಂತ ಶ್ರೇಷ್ಠ ದಾನವಾಗಿದೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಯಾವ ಕಾರಣಕ್ಕೂ ಬಾಲ್ಯವಿವಾಹ ಮಾಡಬೇಡಿ. ಚಿಕ್ಕಂದಿನಲ್ಲೇ ಹೆಣ್ಣು ಮಕ್ಕಳ ಮದುವೆ ಮಾಡಿದರೆ, ಪಾಲಕರೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೂಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಮಾತನಾಡಿ, ಮುಸ್ಲಿಂ ಸಮುದಾಯದ ಮಕ್ಕಳು ಚಿಕ್ಕಂದಿನಲ್ಲಿಯೇ ಕೆಲಸಕ್ಕೆ ಹೋಗುತ್ತಾರೆಂಬ ತಪ್ಪು ಕಲ್ಪನೆಯಿದೆ. ಅದಕ್ಕಾಗಿ ಪಾಲಕರು ಕಡ್ಡಾಯವಾಗಿ ಮಕ್ಕಳನ್ನು ಶಿಕ್ಷಣವಂತರನ್ನಾಗಿಸಿ ಎಂದು ಸಲಹೆ ನೀಡಿದರು.
ರಾಜ್ಯ ಟಿಪ್ಪುಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಅಧ್ಯಕ್ಷ ಟಿಪ್ಪುಖಾಸಿಂ ಆಲಿ ಮಾತನಾಡಿ, ಅಲ್ಪಸಂಖ್ಯಾತರ ಇಲಾಖೆಯಿಂದ ಶಿಕ್ಷಣಕ್ಕಾಗಿ 30ರಿಂದ 50 ಲಕ್ಷ ರೂ. ಸಾಲಸೌಲಭ್ಯ ಸಿಗಲಿದೆ. ಅದನ್ನು ಸದ್ಬಳಕೆ ಮಾಡಿಕೊಂಡು ಇಂಜಿನಿಯರ್, ಐಎಎಸ್, ಐಪಿಎಸ್ ಉನ್ನತ ಹುದ್ದೆ ಅಲಂಕರಿಸುವ ನಿಟ್ಟಿನಲ್ಲಿ ಪಾಲಕರು ಗಮನಹರಿಸಿ ಎಂದು ತಿಳಿಸಿದರು.
ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಯಕ್ಬಾಲ್ ಮಾತನಾಡಿ, ಖಾಸಗಿ ಸ್ಕೂಲ್‌ಗಳ ವ್ಯಾಮೋಹ ಬಿಡಿ. ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ, ಸರ್ಕಾರಿ ಶಾಲೆಗಳಿಗೆ ಸೇರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಸಲಹೆ ನೀಡಿದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮುಸ್ಲಿಂ ಸಮುದಾಯ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.
ಧಾರ್ಮಿಕ ಚಿಂತಕ ಮೌಲಾನ ಎಜಾಜುಲ್ಲಾ, ಎ. ಜಾಕೀರ್‌ಹುಸೇನ್, ಎಚ್.ಆರ್.ಮಹಮದ್, ಮುದಸಿರ್ ನವಾಜ್, ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಸೈಯದ್ ಇಸ್ಮಾಯಿಲ್, ಅಕಾಡೆಮಿ ಅಧ್ಯಕ್ಷ ಎಂ.ಹನೀಫ್, ಕಾರ್ಯಾಧ್ಯಕ್ಷ ನವೀದ್ ಅಬ್ದುಲ್ಲಾ, ಎಸ್.ಎಂ.ವಾಹಿದ್, ನಯಾಜ್‌ಬಾಷ ಇತರರಿದ್ದರು.