

ಅರಕಾರಾ: ತಾಯಂದಿರು ಕಾಲಕಾಲಕ್ಕೆ ಮಕ್ಕಳಿಗೆ ಲಸಿಕೆ ಹಾಕಿಸುವ ಜತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಆಡಳಿತ ವೈದ್ಯಾಧಿಕಾರಿ ಶಿವಕುಮಾರ ನಾರಾ ತಿಳಿಸಿದರು.
ಪಟ್ಟಣದ 1ನೇ ವಾರ್ಡ್ನ ಅಂಗನವಾಡಿ ಕೇಂದ್ರದಲ್ಲಿ ಸಮುದಾಯ ಆರೋಗ್ಯ ಕೇಂದ್ರದಿಂದ ಸೋಮವಾರ ಏರ್ಪಡಿಸಿದ್ದ ಇಂದ್ರಧನುಷ್ 5.0 ಲಸಿಕಾ ಕಾರ್ಯಕ್ರಮದಲ್ಲಿ ಮಾತನಾಡಿದರು.
2023ರ ಅಂತ್ಯದೊಳಗೆ ದೇಶಾದ್ಯಂತ ದಡಾರ ಮತ್ತು ರುಬೆಲ್ಲಾ ನಿರ್ಮೂಲನೆ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಲಸಿಕೆಗಳಿಂದ ವಂಚಿತರಾದ ಗರ್ಭಿಣಿಯರು ಮತ್ತು 0 ಯಿಂದ 5 ವರ್ಷದ ಮಕ್ಕಳಿಗೆ ಇಂದ್ರಧನುಷ್ ಅಭಿಯಾನದ ಮೂಲಕ ಲಸಿಕೆ ನೀಡಲಾಗುತ್ತಿದೆ ಎಂದರು.
ದೇಶದಲ್ಲಿ ಪದೇ ಪದೆ ಒಂದಲ್ಲ ಒಂದು ಹೊಸ ರೋಗಗಳು ಕಾಣಿಸಿಕೊಳ್ಳುತ್ತಿವೆ. ಆದ್ದರಿಂದ ಆಯಾ ಕಾಲಕ್ಕೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ರಂಗಮ್ಮ ಸತ್ಯನಾರಾಯಣ ನಾಯಕ ಪೋ.ಪಾ, ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುನಾಥ ದೊರೆ, ಆರೋಗ್ಯ ನಿರೀಕ್ಷಣಾಧಿಕಾರಿ ಮಲ್ಲಿಕಾರ್ಜುನ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.