

ಚಿತ್ರದುರ್ಗ: ಬಡತನ ನಿವಾರಣೆಯಾಗಬೇಕಾದರೆ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸ ಬೇಕೆಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು. ಹೊಳಲ್ಕೆರೆ ತಾಲೂಕು ಪುಣಜೂರು ಭೋವಿಹಟ್ಟಿ ಗ್ರಾಮದಲ್ಲಿ ಶನಿವಾರ ತಿಮ್ಮಪ್ಪ ಮತ್ತು ಮಸಿಯಮ್ಮ ದೇವಿ ನೂತನ ವಿಗ್ರಹ ಸ್ಥಾಪನೆ,ದೇವಸ್ಥಾನದ ಉದ್ಘಾಟನೆ, ಕಳಸ ಸ್ಥಾಪನೆ ಹಾಗೂ ಶ್ರೀ ಸಿದ್ಧರಾಮೇಶ್ವರ ಜಯಂತಿಯಲ್ಲಿ ಅವರು ಮಾತನಾಡಿ,ಭೋವಿ ಸಮಾಜದವರು ಪರೋಪಕಾರಿಗಳು. ಕಷ್ಟಪಟ್ಟು ದುಡಿದು ಜೀವಿಸುವ ಜನ. ಯಾರಿಗೂ ತೊಂದರೆ ಕೊಡುವವರಲ್ಲ. ನಮ್ಮ ಮನೆ ದೇವರ ದೇವಸ್ಥಾನಗಳು ಎಲ್ಲೆಲ್ಲಿ ಇವೆಯೋ ಅವುಗಳಿಗೆ ಹಣ ಕೊಟ್ಟಿದ್ದೇನೆ. ಮಕ್ಕಳು ಶಾಲೆಗೆ ಹೋಗುವ ಮುನ್ನ ದೇವಸ್ಥಾನಕ್ಕೆ ಹೋಗಿ ಕೈಮುಗಿಯುವ ಅಭ್ಯಾಸ ಕಲಿಸ ಬೇಕು. ಈ ಗ್ರಾಮದಿಂದ ರೈಲು ನಿಲ್ದಾಣದವರೆಗಿನ ರಸ್ತೆಗೆ 4 ಕೋಟಿ ರೂ.ಅನುದಾನ ಕೊಟ್ಟಿದ್ದೇನೆ ಎಂದರು. ತುಮಕೂರು ಕೊರಟಗೆರೆ ಕಾಶಿ ಅನ್ನಪೂರ್ಣೆಶ್ವರಿ ಮಠದ ಶ್ರೀ ಬಸವ ಮಹಾಲಿಂಗಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಗ್ರಾಪಂ ಸದಸ್ಯರಾದ ಕುಮಾರಪ್ಪ, ಸ್ವಾಮಿ, ದಾಸಪ್ಪ, ರಂಗಪ್ಪ, ರುದ್ರಪ್ಪ, ತಿಮ್ಮಜ್ಜ, ಗ್ರಾಮದ ಮುಖಂಡರು ಇದ್ದರು.