

ಕಂಪ್ಲಿ: ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸುವ ಅಗತ್ಯತೆ ಇದೆ ಎಂದು ಪುರಾಣಿಕ ಗಿಣಿವಾರದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.\
ಇಲ್ಲಿನ ಗುರುಮಠದಲ್ಲಿ ಗೊಗ್ಗ ಚನ್ನಬಸಯ್ಯ ಹಾಗೂ ಆದೋನಿಯ ಮಿಠಾಯಿ ಚನ್ನಬಸಯ್ಯ ಅವರ ಪುಣ್ಯಾರಾಧನೆ ನಿಮಿತ್ತ ಶಿವಾನುಭವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಮಕ್ಕಳಲ್ಲಿ ಸಂಸ್ಕಾರದ ಕೊರತೆ ಕಾಡುತ್ತಿದೆ. ಶಿಕ್ಷಣ, ಸಂಸ್ಕಾರದಿಂದ ಮಾತ್ರ ಸಮಾಜ ಸುಧಾರಣೆಯಾಗಲು ಸಾಧ್ಯ. ಗೊಗ್ಗ ಮನೆತನದವರು ಕಳೆದ ಏಳು ದಶಕಗಳಿಂದ ಅನ್ನ, ಅರಿವು, ಆಶ್ರಯ ನೀಡುವ ಮೂಲಕ ವೇದ, ಸಂಸ್ಕೃತ, ಜ್ಯೋತಿಷ ಶಿಕ್ಷಣ ಪೋಷಕರಾಗಿದ್ದಾರೆ ಎಂದರು.
ಪಾಠಶಾಲೆ ನಿವೃತ್ತ ಪ್ರಾಚಾರ್ಯ ಎಂ.ಎಸ್.ಶಶಿಧರಶಾಸ್ತ್ರಿ ಅಧ್ಯಕ್ಷತೆವಹಿಸಿ ಮಾತನಾಡಿ, ಗೊಗ್ಗ ಚನ್ನಬಸಯ್ಯ ಅವರ ಸಮಯಪರಿಪಾಲನೆ ಆದರ್ಶವಾಗಿದೆ. ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ನಿರಂತರ ನಡೆಸಿಕೊಂಡು ಹೋಗುವಲ್ಲಿ ಗೊಗ್ಗ ಮನೆತನದವರು ಸದಾ ಮುಂಚೂಣಿಯಲ್ಲಿರಬೇಕು ಎಂದರು.
ವಚನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ತನುಷ್ಕಾ, ಪವಾಡಿಶೆಟ್ಟಿ ರತನ್, ಬಿ.ಶ್ರೀರಕ್ಷಾ, ಶ್ರೇಯಾ, ದ್ವಿತೀಯ ಬಹುಮಾನವನ್ನು ಶ್ರೇಯಾ, ಜಾಜಿ ಅನೂಷ್ಕಾ, ಕೆ.ದೀಪಿಕಾ, ದೀಪಿಕಾ ಗಳಿಸಿದರು. ಪ್ರಮುಖರಾದ ಅಯೋಧ್ಯೆ ಶರಣಬಸವರಾಜ, ಅರವಿ ಬಸವನಗೌಡ, ಗೊಗ್ಗ ಶಾಂತಾ, ಗೊಗ್ಗ ಕಾರ್ತೀಕ್, ಸುಪ್ರಿಯಾ, ಬಸವಕುಮಾರ್, ಎಸ್.ಡಿ.ಬಸವರಾಜ, ಮುಕ್ಕುಂದಿ ಶಿವಗಂಗಮ್ಮ, ಡಿ.ಶಿವನಾಗಪ್ಪ, ಬಿ.ಎಂ.ರುದ್ರಯ್ಯ, ಕೆ.ಎಂ.ಚಂದ್ರಶೇಖರಸ್ವಾಮಿ, ಎಚ್.ಎಂ.ಜಗದೀಶ ಇತರರಿದ್ದರು.