ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ

26telsang1
ತೆಲಸಂಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಠರಾಯ ದೇವರ ಜಾತ್ರಾ ಮಹೋತ್ಸವಕ್ಕೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಚಾಲನೆ ನೀಡಿದರು. ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ಎಂ.ಟಿ.ಬಿ. ನಾಗರಾಜ, ಭೈರತಿ ಬಸವರಾಜ, ಅಮರೇಶ್ವರ ಮಹಾರಾಜರು, ರೇವಣಸಿದ್ಧ ಸ್ವಾಮೀಜಿ, ಮಾಧುಲಿಂಗ ಮಹಾರಾಜರು ಮತ್ತಿತರರು ಉಪಸ್ಥಿತರಿದ್ದರು.
Published on

ತೆಲಸಂಗ: ಈ ಭೂಮಿ, ಗೋವು ಗೌರವಿಸುವ ನೆಲದಲ್ಲಿ ಭಯೋತ್ಪಾದಕರು ಬಂದು ಬಿಟ್ಟಿದ್ದಾರೆ. ಅವರು ನಮ್ಮ ಮಧ್ಯೆಯೇ ಇರುತ್ತಾರೆ. ಅಂತವರಿಗೆ ಈ ನೆಲ- ಜಲದ ಬಗ್ಗೆ ಗೌರವವಿಲ್ಲ. ಭಾರತ್ ಮಾತಾ ಕೀ ಜೈ ಎಂದು ಹೇಳುವುದು ಅವರಿಗೆ ಗೊತ್ತಿಲ್ಲ. ಈಗ ಹಿಂದು ಸಮಾಜ ಸಂಘಟಿತವಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಗ್ರಾಮದ ವಿಠರಾಯ ದೇವರ ಜಾತ್ರಾ ಮಹೋತ್ಸವಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬ ಪಾಲಕರು ಮಕ್ಕಳನ್ನು ದೇಶದ ಆಸ್ತಿಯನ್ನಾಗಿಸಬೇಕು. ಈ ನಿಟ್ಟಿನಲ್ಲಿ ಪ್ರತಿಜ್ಞೆ ಮಾಡಬೇಕು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಈ ದೇಶದ ಗೋವುಗಳು, ಭೂಮಿ, ದೇವಸ್ಥಾನಗಳನ್ನು ರಕ್ಷಿಸಿ ಉಳಿಸುವ ಶಕ್ತಿಯುತ, ಸಂಸ್ಕಾರಯುತ ಮಕ್ಕಳನ್ನು ಬೆಳೆಸಬೇಕು ಎಂದರು.

ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ತೆಲಸಂಗದಲ್ಲಿ ಹಾಲುಮತ ಸಮುದಾಯದ ಕಲ್ಯಾಣಮಂಟಪ ನಿರ್ಮಾಣಕ್ಕೆ 25 ಲಕ್ಷ ರೂ. ಅನುದಾನ ಕೊಡುವುದು ಮಾತ್ರವಲ್ಲದೆ, ಮುಖ್ಯಮಂತ್ರಿಗಳ ವಿಶೇಷ ಅನುದಾನ ಕೊಡಿಸುವ ಪ್ರಯತ್ನ ಮಾಡುವೆವು. ಎಂ.ಟಿ.ಬಿ. ನಾಗರಾಜ ಮತ್ತು ಭೈರತಿ ಬಸವರಾಜ ನಮ್ಮ ಪಕ್ಷಕ್ಕೆ ಬಂದಿದ್ದರಿಂದ ಆನೆಬಲ ಬಂದಿದೆ. ನಂಬಿಗಸ್ತ ಹಾಲುಮತ ಸಮುದಾಯದ ಧರ್ಮದ ಪೆಟ್ಟಿಗೆಯಲ್ಲಿ ನಾವೆಲ್ಲ ಇದ್ದೇವೆ. ನಿಮ್ಮೆಲ್ಲರಿಗೂ ಶಿಕ್ಷಣ, ಮೂಲ ಸೌಕರ್ಯ ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಹೇಳಿದರು.

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಮಾತನಾಡಿ, ಕುರುಬ ಸಮುದಾಯದಲ್ಲಿ ದೇವರನ್ನು ವಿವಿಧ ಹೆಸರಿನಲ್ಲಿ ಆರಾಧಿಸಲಾಗುತ್ತದೆ. ಒಂದು ಕುರಿ 9 ಲಕ್ಷ ಬೆಲೆ ಬಾಳುತ್ತದೆ ಎಂಬುದನ್ನು ಕೇಳಿ ಆಶ್ಚರ್ಯಪಟ್ಟೆ. ಕೋವಿಡ್ ಕಾರಣದಿಂದಾಗಿ ಜಾತ್ರೆಯನ್ನು ಮಾಡಿರಲಿಲ್ಲ. 21 ಹಳ್ಳಿಗಳಿಂದ ಒಂದೆಡೆ ಸೇರಿ, ದೇವರ ಆರಾಧನೆ ಮಾಡುತ್ತಿದ್ದೀರಿ. ಮನುಷ್ಯನಿಗೆ ಶಾಂತಿ, ನೆಮ್ಮದಿ ಬೇಕು ಎಂದಾದರೆ ಜಾತ್ರೆ, ದೇವರ ಆರಾಧನೆ ಅತ್ಯವಶ್ಯ ಎಂದರು.

ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ ಮಾತನಾಡಿ, ಎಲ್ಲ ಸಮುದಾಯದವರು ಸೇರಿ ಮಾಡುತ್ತಿರುವ ಜಾತ್ರೆ ಮಾದರಿಯಾಗಿದೆ. ಅನಾದಿಕಾಲದಿಂದಲೂ ಆಚರಿಸಿಕೊಂಡ ಬಂದ ಹಿಂದು ಸಂಪ್ರದಾವಯನ್ನು ಮುಂದುವರಿಸಿಕೊಂಡು ಬಂದಿದ್ದೇವೆ. ಹೆಸರು ಬೇರೆ ಬೇರೆ ಇದ್ದರೂ, ದೇವರು ಒಬ್ಬನೇ. ಹಾಲುಮತ ಸಮುದಾಯ 60 ಲಕ್ಷ ಜನಸಂಖ್ಯೆ ಹೊಂದಿದೆ. ಇವರ ಆರಾಧ್ಯ ದೇವರು ಈಶ್ವರ. ಮನುಷ್ಯರಾಗಿ ಹುಟ್ಟಿ ಸತ್ಯ ಮತ್ತು ಧರ್ಮದ ಹಾದಿಯಲ್ಲಿ ನಡೆದು ವಿಠರಾಯರು ದೇವರಾಗಿದ್ದಾರೆ. ಅವರ ಹಾದಿಯಲ್ಲಿ ನಡೆಯುವ ಮೂಲಕ ಧನ್ಯತೆ ಹೊಂದೋಣ ಎಂದು ಹೇಳಿದರು. ಅಮರೇಶ್ವರ ಮಹಾರಾಜರು, ಸರೂರ ರೇವಣಸಿದ್ಧ ಸ್ವಾಮೀಜಿ, ಜಕನೂರ ಮಾಧುಲಿಂಗ ಮಹಾರಾಜರು, ತೆಲಸಂಗದ ಬಸವ ಗುಂಡಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಮಾಜಿ ಶಾಸಕರು, ಗಣ್ಯರು, ವಿವಿಧ ಪಕ್ಷಗಳ ಗಣ್ಯರು ಇತರರಿದ್ದರು.

ಗ್ರಾಮದಲ್ಲಿ ಸಂಭ್ರಮ

ವಿಠರಾಯ ಜಾತ್ರೆಯ ನಿಮಿತ್ತ ಗುರುವಾರ ಬೆಳಗ್ಗೆ 21 ಗ್ರಾಮಗಳ ಪಲ್ಲಕ್ಕಿ ಉತ್ಸವ ಮತ್ತು ಕುಂಭಮೇಳ ವಿಜೃಂಭಣೆಯಿಂದ ಜರುಗಿತು. ಡೊಳ್ಳು ಕುಣಿತ, ಕುರಿಗಳ ಮೇಳ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಉತ್ಸವಕ್ಕೆ ಮೆರಗು ತಂದುಕೊಟ್ಟವು. ಗ್ರಾಮದ ಹನುಮಾನ ಮಂದಿರದಿಂದ ಹೊರಟ ಉತ್ಸವ, ಗ್ರಾಮದ ಪ್ರಮುಖ ಬೀದಿಗಳ ಮೂಲಕ ಗ್ರಾಮದ ಹೊರವಲಯದ ಸಣ್ಣೆಪ್ಪ ಸತ್ಯಪ್ಪ ದೇವಸ್ಥಾನ ತಲುಪಿತು. ಅನ್ನಪ್ರಸಾದ ಸೇವೆ ಜರುಗಿತು. ಡೊಳ್ಳಿನ ಪದಗಳ ಪ್ರದರ್ಶನ ನಡೆಯಿತು. ಬುಧವಾರ ರಾತ್ರಿಯೇ ಗ್ರಾಮಕ್ಕೆ ಆಗಮಿಸಿದ್ದ ಪಲ್ಲಕ್ಕಿ ಬರಮಾಡಿಕೊಂಡು ದರ್ಗಾ ಆವರಣದಲ್ಲಿ ಭೇಟಿ ಮಾಡುವ ಕಾರ್ಯಕ್ರಮ ಜರುಗಿತು. ಪಲ್ಲಕ್ಕಿಗಳ ಭೇಟಿ ಕಾರ್ಯಕ್ರಮ ಭಕ್ತರನ್ನು ಭಕ್ತಿಯಲ್ಲಿ ತೇಲುವಂತೆ ಮಾಡಿತು. ಡೊಳ್ಳು ನಾದಕ್ಕೆ ಪಲ್ಲಕ್ಕಿ ಹೊತ್ತವರ ಕುಣಿತ ಕೆಲ ಹೊತ್ತು ಭಕ್ತಾದಿಗಳನ್ನು ಮಂತ್ರಮುಗ್ಧರನ್ನಾಗಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net