ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ

21hbd 03
Published on

ಚಿಟಗುಪ್ಪ: ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಮತ್ತು ಸ್ವಚ್ಛತೆ ಕುರಿತು ತಿಳುವಳಿಕೆ ನೀಡಿ, ಆರೋಗ್ಯ ಕಡೆ ಹೆಚ್ಚಿನ ಗಮನ ಹರಿಸಬೇಕು. ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ಶಿಕ್ಷಣದ ಜತೆ ಗುರು ಹಿರಿಯರಿಗೆ ಗೌರವ ನೀಡುವುದು ಕಲಿಸಬೇಕು ಎಂದು ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.

ಬೀದರ್ ದಕ್ಷಿಣ ಕ್ಷೇತ್ರದ ಮೊಗದಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನೂತನ ಶಾಲಾ ಕೋಣೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಶಾಲೆಯಲ್ಲಿ ಕೋಣೆಗಳ ಅವಶ್ಯ ಇದೆ. ಮುಂದಿನ ದಿನಗಳಲ್ಲಿ ಶಾಲೆಗೆ ಇನ್ನಷ್ಟು ಕೋಣೆ ಒದಗಿಸಲಾಗುವುದು ಎಂದರು.

ಗ್ರಾಮದ ಸರ್ಕಾರಿ ಕನ್ನಡ ಮತ್ತು ಉರ್ದು ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ಶಾಸಕರು ಭೇಟಿ ನೀಡಿ, ಶಾಲೆಯಲ್ಲಿನ ಶಿಕ್ಷಣ ಗುಣಮಟ್ಟ, ಬಿಸಿಯೂಟ, ಕ್ಷೀರಭಾಗ್ಯ ಸೇರಿ ಇತರ ಕಾರ್ಯಚಟುವಟಿಕೆ ಕುರಿತು ಮುಖ್ಯ ಶಿಕ್ಷಕರು ಸೇರಿ ಸಹ ಶಿಕ್ಷಕರೊಂದಿಗೆ ಚರ್ಚಿಸಿದರು.

ಮೊಗದಾಳ ಶಾಲೆ ಸೇರಿ ತಾಲೂಕಿನಲ್ಲಿ ಎಷ್ಟು ಶಾಲೆ ಕೊಠಡಿಗಳು ದುರಸ್ತಿಗೆ ಬಂದಿವೆ. ತ್ವರಿತಗತಿಯಲ್ಲಿ ಪಟ್ಟಿ ಮಾಡಿ, ಸರ್ಕಾರದಿಂದ ಹಣ ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು.

ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಅಶೋಕ ಮಾತನಾಡಿ, ಶಾಲೆಯ ಬಹುತೇಕ ಕೊಠಡಿಗಳು ದುರಸ್ತಿಗೆ ಬಂದಿರುವ ಬಗ್ಗೆ, ಶೌಚಗೃಹ, ಸುತ್ತುಗೋಡೆ ನಿರ್ಮಾಣ ಸೇರಿ ಇತರ ಸಮಸ್ಯೆ ಕುರಿತು ಶಾಸಕ ಗಮನಕ್ಕೆ ತಂದರು.

ಮುಖಂಡರಾದ ನಾಗಭೂಷಣ ಕಮಠಾಣಾ, ಎಇಇ ಭಗವಾನ ಸಿಂಗ್, ಪಿಡಿಒ ಚಂದ್ರಶೇಖರ ರೆಡ್ಡಿ, ಮಹಾದೇವಿ, ಫಯುಜುಲ್ಲಾ, ಮೋವಿಖಾನ್, ನಂದಕುಮಾರ ಕುಲಕರ್ಣಿ, ನಾಗಪ್ಪ ಜಮಾದಾರ, ಹುಸೇನ್, ತಾಹೇರ್, ಶರಣು ಮಡಿವಾಳ, ವೈಜನಾಥ ಶೇರಿಕಾರ್, ಪ್ರಭು, ರಾಮಚಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net